ಉತ್ತರಪ್ರದೇಶ | ಸಂಭಲ್ ನಲ್ಲಿ ಕಸ್ಟಡಿ ಸಾವು ಪ್ರಕರಣ

PC : PTI
ಲಕ್ನೊ: ಉತ್ತರಪ್ರದೇಶದ ಸಂಬಲ್ ಪಟ್ಟಣದಲ್ಲಿರುವ ಪೊಲೀಸ್ ಹೊರ ಠಾಣೆಗೆ ಕರೆದೊಯ್ಯಲಾದ 40 ವರ್ಷದ ಇರ್ಫಾನ್ ಎಂಬ ವ್ಯಕ್ತಿ ಸೋಮವಾರ ಕಸ್ಟಡಿಯಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆತನ ಕುಟುಂಬ ಹಾಗೂ ಸ್ಥಳೀಯ ನಿವಾಸಿಗಳು ಮಂಗಳವಾರ ಸಂಭಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸರು ಇರ್ಫಾನ್ಗೆ ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿದೆ. ಈ ಸಾವಿನ ಹಿನ್ನೆಲೆಯಲ್ಲಿ ಪೊಲೀಸ್ ಹೊರ ಠಾಣೆಯ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರ ದಾಳಿಗೆ ಹೆದರಿ ಪೊಲೀಸ್ ಸಿಬ್ಬಂದಿ ಅಲ್ಲಿಂದ ಓಡಿ ಹೋದರು ಎಂದು ಮೂಲಗಳು ತಿಳಿಸಿವೆ.
ಇರ್ಫಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಅಲ್ಲದೆ, ಆತನಿಗೆ ಕಸ್ಟಡಿಯಲ್ಲಿ ಚಿತ್ರ ಹಿಂಸೆ ನೀಡಿರುವುದನ್ನು ನಿರಾಕರಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ಷಿಪ್ರ ಕಾರ್ಯ ಪಡೆ (ಐಎಎಫ್), ನಖಾಸಾ ಹಾಗೂ ಕೊಟ್ವಾಲಿ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ನಿಯೋಜಿಸಲಾಯಿತು.
ಸಾಲ ಮರು ಪಾವತಿಸಿಲ್ಲ ಎಂದು ಆರೋಪಿಸಿ ಇರ್ಫಾನ್ನ ಸಂಬಂಧಿಕರು ಪೊಲೀಸ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇರ್ಫಾನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ರಾಯಸತ್ತಿ ಹೊರಠಾಣೆಯ ನಾಲ್ವರು ಪೊಲೀಸ್ ಅಧಿಕಾರಿಗಳು ತನ್ನ ಅನಾರೋಗ್ಯ ಪೀಡಿತ ಪತಿಯನ್ನು ವಿಚಾರಣೆಗೆ ದೂರ ಕರೆದುಕೊಂಡು ಹೋಗಿದ್ದಾರೆ ಹಾಗೂ ಅವರಿಗೆ ಥಳಿಸಿದ್ದಾರೆ ಎಂದು ಇರ್ಫಾನ್ ಅವರ ಪತ್ನಿ ರೇಶ್ಮಾ ತಿಳಿಸಿದ್ದಾರೆ.
‘‘ಅವರ ಆರೋಗ್ಯ ಸರಿ ಇಲ್ಲ. ಕನಿಷ್ಠ ಔಷಧ ತೆಗೆದುಕೊಳ್ಳಲು ಸಮಯ ನೀಡಬೇಕು ಎಂದು ನಾವು ಪೊಲೀಸರಲ್ಲಿ ಮನವಿ ಮಾಡಿದ್ದೆವು. ಆದರೆ, ಅವರು ನಮ್ಮ ಮನವಿಯನ್ನು ಆಲಿಸಲಿಲ್ಲ’’ ಎಂದು ಅವರು ಹೇಳಿದ್ದಾರೆ.
ಅವರನ್ನು ಜೀಪಿನಲ್ಲಿ ಕರೆದೊಯ್ದರು. ಅವರು ಔಷಧ ತೆಗೆದುಕೊಂಡಿದ್ದರೆ, ಬದುಕುಳಿಯುತ್ತಿದ್ದರು. ಅವರನ್ನು ಪೊಲೀಸರು ಕೊಂದರು ಎಂದು ಅವರು ಹೇಳಿದ್ದಾರೆ.
ಕಸ್ಟಡಿ ಚಿತ್ರಹಿಂಸೆಯ ಆರೋಪ ನಿರಾಕರಿಸಿದ ಸಂಭಲ್ ಪೊಲೀಸರು, ಇರ್ಫಾನ್ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂದು ಪ್ರತಿಪಾದಿಸಿದ್ದಾರೆ. ಪೊಲೀಸ್ ಹೊರ ಠಾಣೆಯಲ್ಲಿ ಇರ್ಫಾನ್ನನ್ನು ಕಸ್ಟಡಿಗೆ ತೆಗೆದುಕೊಳ್ಳುವಾಗ ಆತನ ಪುತ್ರ ಕೂಡ ಜೊತೆಗಿದ್ದ ಎಂದು ಪೊಲೀಸ್ ವರಿಷ್ಠ ಕೃಷ್ಣ ಕುಮಾರ್ ಬಿಷ್ಣೋಯಿ ತಿಳಿಸಿದ್ದಾರೆ.
‘‘ತನ್ನ ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರು ಔಷಧ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಇರ್ಫಾನ್ ಅವರ ಪುತ್ರ ಪೊಲೀಸರಿಗೆ ತಿಳಿಸಿದ್ದ. ಇರ್ಫಾನ್ ಮಾತ್ರೆ ತೆಗೆದುಕೊಂಡ ಬಳಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದ. ಕುಟುಂಬದ ಸದಸ್ಯರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಆತ ಮಾರ್ಗ ಮಧ್ಯ ಮೃತಪಟ್ಟ’’ ಎಂದು ಅವರು ಹೇಳಿದ್ದಾರೆ.







