ಉತ್ತರ ಪ್ರದೇಶ | ದರೋಡೆ ಯತ್ನದ ಆರೋಪದಲ್ಲಿ ಯುವಕರನ್ನು ತಲೆ ಕೆಳಗಾಗಿ ಕಟ್ಟಿ ಹಾಕಿ ಥಳಿಸಿದ ಗುಂಪು; ಓರ್ವ ಮೃತ್ಯು

ಸಾಂದರ್ಭಿಕ ಚಿತ್ರ
ಸಹಾರನ್ಪುರ: ಗ್ರಾಮಸ್ಥರ ಗುಂಪು ದರೋಡೆಗೆ ಯತ್ನಿಸಿದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ತಲೆ ಕೆಳಗಾಗಿ ಕಟ್ಟಿ ಹಾಕಿ ದೊಣ್ಣೆಗಳಿಂದ ಮಾರಣಾಂತಿಕವಾಗಿ ಥಳಿಸಿದ ಘಟನೆ ಜ.13ರಂದು ಉತ್ತರ ಪ್ರದೇಶದ ಸಹಾರನ್ಪುರ ಜಿಲ್ಲೆಯ ನವಾಡಾ ಗ್ರಾಮದಲ್ಲಿ ನಡೆದಿದೆ.
ಯುವಕರಿಬ್ಬರೂ ತೀವ್ರವಾಗಿ ಗಾಯಗೊಂಡಿದ್ದು,ಈ ಪೈಕಿ ಮುಹಮ್ಮದ್ ಸಲ್ಮಾನ್(27) ಚಿಕಿತ್ಸೆ ಫಲಕಾರಿಯಾಗದೆ ಜ.18ರಂದು ಮೃತಪಟ್ಟಿದ್ದರೆ, ಮುಹಮ್ಮದ್ ರಫೀದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೊಡೆತ ತಿಂದು ರಫೀದ್ ಪ್ರಜ್ಞಾಶೂನ್ಯನಾಗಿ ಬಿದ್ದಿದ್ದರೆ, ಕಾಲುಗಳನ್ನು ಕಟ್ಟಿ ತಲೆ ಕೆಳಗಾಗಿ ಹಿಡಿಯಲ್ಪಟ್ಟಿದ್ದ ಸಲ್ಮಾನ್ನನ್ನು ಗುಂಪು ದೊಣ್ಣೆಗಳಿಂದ ಥಳಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
ರಾಜಕುಮಾರ್ ಮನೆಯಲ್ಲಿ ದರೋಡೆ ಯತ್ನದ ಬಗ್ಗೆ ಪಿಸಿಆರ್ಗೆ ಕರೆ ಬಂದಿತ್ತು. ಇಬ್ಬರೂ ಯುವಕರು ಶಸ್ತ್ರಸಜ್ಜಿತರಾಗಿದ್ದು,ದರೋಡೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ. ಮನೆಯವರು ಬೊಬ್ಬೆ ಹೊಡೆದಾಗ ಧಾವಿಸಿ ಬಂದ ಗ್ರಾಮಸ್ಥರು ಪರಾರಿಯಾಗಲು ಯತ್ನಿಸುತ್ತಿದ್ದ ಅವರನ್ನು ಹಿಡಿದು ಥಳಿಸಿದ್ದಾರೆ ಎಂದು ಸಹಾರನ್ಪುರ ಎಸ್ಪಿ ಸಾಗರ ಜೈನ್ ತಿಳಿಸಿದರು..
ಗಾಯಗೊಂಡಿದ್ದ ಸಲ್ಮಾನ್ ಮತ್ತು ರಫೀದ್ರನ್ನು ಪೋಲಿಸರು ಆಸ್ಪತ್ರೆಗೆ ದಾಖಲಿಸಿದ್ದರು,ಆದರೆ ಸಲ್ಮಾನ್ ಚಿಕಿತ್ಸೆ ಸಂದರ್ಭದಲ್ಲಿ ಮೃತ ಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯ ಬಳಿಕ ಆತನ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ ಎಂದರು.
ದರೋಡೆ ಯತ್ನದ ಆರೋಪದಲ್ಲಿ ಸಲ್ಮಾನ್ ಮತ್ತು ರಫೀದ್ ವಿರುದ್ಧ ಪ್ರಕರಣ ದಾಖಲಾಗಿದ್ದರೆ ಅವರಿಬ್ಬರನ್ನೂ ಕ್ರೂರವಾಗಿ ಥಳಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿಲ್ಲ ಎಂದು ಆರೋಪಿಸಲಾಗಿದೆ.
ಥಳಿತದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗುಂಪು ನ್ಯಾಯದ ಬಗ್ಗೆ ಚರ್ಚೆಗಳಿಗೂ ನಾಂದಿ ಹಾಡಿದೆ.
ಘಟನೆಯು ಗುಂಪು ಹಿಂಸಾಚಾರದ ಅಪಾಯಗಳನ್ನು ಮತ್ತು ನ್ಯಾಯದ ತುರ್ತು ಅಗತ್ಯವನ್ನು ಎತ್ತಿ ತೋರಿಸಿದೆ. ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಎಸ್ಪಿ ಜೈನ್ ಭರವಸೆ ನೀಡಿದ್ದಾರೆ.







