ಉತ್ತರ ಪ್ರದೇಶ | ಡಿಜಿಟಲ್ ಅರೆಸ್ಟ್; ವ್ಯಕ್ತಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನಾಲ್ವರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಪ್ರತಾಪ್ ಗಢ: ಡಿಜಿಟಲ್ ಬಂಧನ ನಡೆಸಿ, ತನ್ನಿಂದ ಹಣ ಸುಲಿಗೆ ಮಾಡಿದ್ದರಿಂದ ಬೇಸತ್ತು 52 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪ್ರತಾಪ್ ಗಢ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಕ್ರಿಮಿನಲ್ ಪಿತೂರಿ ಹಾಗೂ ಇನ್ನಿತರ ಆರೋಪಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನುಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾನ್ಪುರ ನಿವಾಸಿಗಳಾದ ರೋಹಿತ್ ಪ್ರಜಾಪತಿ (20), ಅಮಿತ್ ಶಾ ಚೌಹಾಣ್ (20) ಹಾಗೂ ವೀರ್ ಪ್ರತಾಪ್ (33) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಬಂಧಿತ ಆರೋಪಿ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕನಾಗಿದ್ದಾನೆ.
ಪಂಚಾಯತ್ ರಾಜ್ ಇಲಾಖೆಯಲ್ಲಿ ಸಫಾಯಿ ಕರ್ಮಚಾರಿಯಾಗಿದ್ದ 52 ವರ್ಷದ ಗ್ಯಾನ್ ದಾಸ್ ಗೌತಮ್ ಎಂಬುವವರು ತಮ್ಮ ನಿವಾಸದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿದ್ದ ಮೃತ ಗ್ಯಾನ್ ದಾಸ್ ಗೌತಮ್ ಅವರ ಸಹೋದರ, ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಮೃತ ಸಹೋದರನ್ನು ಡಿಜಿಟಲ್ ವಂಚನೆ ಬಲೆಯೊಳಗೆ ಸಿಲುಕಿಸಿ, ಅವರಿಂದ ಬಲವಂತವಾಗಿ ಹಲವು ಬಾರಿ ಹಣ ಪಾವತಿ ಮಾಡಿಸಿಕೊಂಡಿದ್ದರು ಎಂದು ಆರೋಪಿಸಿದ್ದರು.
ಈ ದೂರನ್ನು ಆಧರಿಸಿ ಬ್ಯಾಂಕ್ ವಹಿವಾಟುಗಳು ಹಾಗೂ ಕರೆ ದಾಖಲೆಗಳ ತನಿಖೆ ನಡೆಸಿದಾಗ, ಗ್ಯಾನ್ ದಾಸ್ ಕೆಲವು ಅಪರಿಚಿತ ವ್ಯಕ್ತಿಗಳ ಖಾತೆಗೆ ಹಲವು ಬಾರಿ ಹಣ ವರ್ಗಾಯಿಸಿರುವುದು ಬಹಿರಂಗಗೊಂಡಿತ್ತು.
ಅಪರಾಧ ವಿಭಾಗದ ಪೊಲೀಸರಂತೆ ಸೋಗು ಹಾಕಿದ್ದ ಸೈಬರ್ ಅಪರಾಧಿಗಳು, ಗ್ಯಾನ್ ದಾಸ್ ಗೆ ಕರೆ ಮಾಡಿ, ನಾವು ನಿಮ್ಮನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ, ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸಿದ್ದರು.
ಗ್ಯಾನ್ ದಾಸ್ ರ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದುದರಿಂದ, ಅವರು ತಮ್ಮ ಕುಟುಂಬದ ಆಭರಣಗಳಲ್ಲಿ ಗಿರವಿ ಇಟ್ಟು, ಸೈಬರ್ ಅಪರಾಧಿಗಳ ಹಣದ ಬೇಡಿಕೆಯನ್ನು ಈಡೇರಿಸಿದ್ದರು. ಅಲ್ಲದೇ ತಮ್ಮ ಆಭರಣಗಳೊಂದಿಗೆ 1 ಲಕ್ಷ ರೂ. ಪಾವತಿಸಿದ್ದರು ಎಂದು ಹೇಳಲಾಗಿದೆ.
ಅತಿಯಾದ ಮಾನಸಿಕ ಒತ್ತಡ ಹಾಗೂ ಆರ್ಥಿಕ ಮುಗ್ಗಟ್ಟಿಗೆ ಗುರಿಯಾಗಿದ್ದ ಗ್ಯಾನ್ ದಾಸ್, ಕೊನೆಗೆ ಜನವರಿ 30ರಂದು ಆತ್ಮಹತ್ಯೆಗೆ ಶರಣಾಗಿದ್ದರು.
ಅವರ ಸಾವಿನ ಬೆನ್ನಿಗೇ ಪ್ರತಾಪ್ ಗಢದ ಫತನ್ ಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ರಕರಣ ದಾಖಲಾದ ಬೆನ್ನಿಗೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳ ಸ್ಥಳವನ್ನು ಪತ್ತೆ ಹಚ್ಚಿ, ಕಾನ್ಪುರ್ ನಗ್ ನಲ್ಲಿನ ಭೀಮ್ ಸೇನ್-ರೇವರಿ ರಸ್ತೆ ಬಳಿಯ ಆಟದ ಮೈದಾನವೊಂದರ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, “ಕಾರ್ಯಾಚರಣೆಯ ಸಂದರ್ಭದಲ್ಲಿ ಕಾನೂನು ಜಾರಿ ಅಧಿಕಾರಿಗಳಂತೆ ಸೋಗು ಹಾಕಲು ಹಾಗೂ ಸಂತ್ರಸ್ತರನ್ನು ಬೆದರಿಸಲು ಆರೋಪಿಗಳು ಬಳಸುತ್ತಿದ್ದ ಅಪರಾಧ ವಿಭಾಗದ ನಕಲಿ ಗುರುತಿನ ಚೀಟಿ ಸೇರಿದಂತೆ ಸದರಿ ಗುಂಪು ವಂಚಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಪುರಾವೆಗಳನ್ನು ವಶಪಡಿಸಿಕೊಳ್ಳಲಾಯಿತು. ಸಂತ್ರಸ್ತರನ್ನು ಸಂಪರ್ಕಿಸಲು ಹಾಗೂ ಬೆದರಿಕೆ ಒಡ್ಡಲು ಆರೋಪಿಗಳು ಹಲವು ಮೊಬೈಲ್ ಫೋನ್ ಗಳು ಹಾಗೂ ಸಿಮ್ ಕಾರ್ಡ್ ಗಳನ್ನು ಬಳಸಿದ್ದಾರೆ. ಸುಲಿಗೆ ಮಾಡಲು ಫೋನ್ ಪೇ, ಪೇಟಿಮ್ ಹಾಗೂ ಇನ್ನಿತರ ಆನ್ ಲೈನ್ ವೇದಿಕೆಗಳನ್ನು ಹಣ ಸ್ವೀಕರಿಸಲು ಬಳಸಿರುವುದು ಬ್ಯಾಂಕ್ ವಹಿವಾಟು ದಾಖಲೆಗಳಿಂದ ತಿಳಿದು ಬಂದಿದೆ. ಸೈಬರ್ ಅಪರಾಧಿಗಳ ಬೇಡಿಕೆಗಳನ್ನು ಈಡೇರಿಸಲು ಸಂತ್ರಸ್ತರು ತಮ್ಮ ವಸ್ತುಗಳನ್ನು ನಗದೀಕರಿಸಿರುವುದು ಬ್ಯಾಂಕ್ ಚೀಟಿಗಳು ಹಾಗೂ ಗಿರವಿ ರಸೀದಿಗಳಿಂದ ಸಾಬೀತಾಗಿದೆ” ಎಂದು ಹೇಳಿದ್ದಾರೆ.
ಈ ವಂಚಕರ ಗುಂಪು ಇನ್ನೂ 100ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದರೂ, ಹಿಂಜರಿಕೆಯಿಂದ ಸಂತ್ರಸ್ತರು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಅವರ ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಈ ಗುಂಪಿನ ಇನ್ನೂ ನಾಲ್ವರನ್ನು ಪತ್ತೆ ಹಚ್ಚಲು ಪೊಲೀಸರು ಸಕ್ರಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಜನರು ಇಂತಹ ಆನ್ ಲೈನ್ ವಂಚನೆಗಳ ಬಗ್ಗೆ ಜಾಗೃತರಾಗಿರಬೇಕು ಹಾಗೂ ಇಂತಹ ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದರೆ, ಸೈಬರ್ ಅಪರಾಧ ಘಟಕಗಳಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.







