ಉತ್ತರ ಪ್ರದೇಶ | ದಿಲ್ಲಿಗೆ ತೆರಳುತ್ತಿದ್ದ ಅಯೋಧ್ಯಾ ಎಕ್ಸ್ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ ಕರೆ

PC : PTI
ಬಾರಾಬಂಕಿ(ಉ.ಪ್ರ.): ದಿಲ್ಲಿಗೆ ತೆರಳುತ್ತಿದ್ದ ಅಯೋಧ್ಯಾ ಎಕ್ಸ್ಪ್ರೆಸ್ ರೈಲು ಶುಕ್ರವಾರ ಬಾಂಬ್ ಬೆದರಿಕೆ ಕರೆ ಸ್ವೀಕರಿಸಿದೆ. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಗಾಗಿ ಅಧಿಕಾರಿಗಳು ರೈಲನ್ನು ಬಾರಾಬಂಕಿ ರೈಲು ನಿಲ್ದಾಣದಲ್ಲಿ ನಿಲ್ಲಿಸಿದರು.
ಸರಿಸುಮಾರು ಎರಡು ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಡೆಯಿತು. ಈ ಸಂದರ್ಭ ಯಾವುದೇ ಸ್ಪೋಟಕ ಅಥವಾ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ದೂರವಾಣಿ ಸಂಖ್ಯೆ 112ರಿಂದ ಈ ಬೆದರಿಕೆ ಕರೆ ಸ್ವೀಕರಿಸಲಾಗಿತ್ತು. ಕರೆ ಮಾಡಿದ ವ್ಯಕ್ತಿ ಅಯೋಧ್ಯಾ ಎಕ್ಸ್ಪ್ರೆಸ್ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಪ್ರತಿಪಾದಿಸಿದ್ದ. ಅಲ್ಲದೆ, ರೈಲು ಲಕ್ನೋದ ಚಾರ್ಬಾಗ್ ರೈಲು ನಿಲ್ದಾಣಕ್ಕೆ ತಲುಪುವ ಮುನ್ನ ಸ್ಫೋಟಗೊಳ್ಳಲಿದೆ ಎಂದು ಆತ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ರಾತ್ರಿ 7.30ಕ್ಕೆ ಬಾರಾಬಂಕಿ ರೈಲು ನಿಲ್ದಾಣಕ್ಕೆ ಆಗಮಿಸಿದಾಗ ಅಲ್ಲಿ ಭಾರೀ ಸಂಖ್ಯೆಯ ಪೊಲೀಸರು ಇದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಇತರ ಶೋಧ ದಳಗಳು ಪ್ರತಿಯೊಂದು ಬೋಗಿಯಲ್ಲಿ ಕೂಲಂಕಷ ಶೋಧ ಕಾರ್ಯಾಚರಣೆ ನಡೆಸಿದವು ಎಂದು ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ರೈಲು ಲಕ್ನೋದ ಚಾರ್ಬಾಗ್ ನಿಲ್ದಾಣವನ್ನು ತಲುಪುವ ಮುನ್ನ ಸ್ಪೋಟಿಸಲಾಗುವುದು ಎಂದು ಪ್ರತಿಪಾದಿಸುವ ಸಂದೇಶವೊಂದು ಎಸ್-8 ಬೋಗಿಯ ಶೌಚಾಲಯದಲ್ಲಿ ಪತ್ತೆಯಾಗಿದೆ ಎಂದು ಶೋಧ ಕಾರ್ಯಾಚರಣೆ ನಡೆಸಿದ ತಂಡ ತಿಳಿಸಿದೆ.







