ಉತ್ತರ ಪ್ರದೇಶ | ಹೋಳಿ ದಿನ ಮುಸ್ಲಿಮರಿಗೆ ಮನೆಯೊಳಗೆ ಇರುವಂತೆ ಹೇಳಿದ ಸಂಭಲ್ ಡಿಎಸ್ಪಿಗೆ ಮಾಜಿ ಹಿರಿಯ ಅಧಿಕಾರಿಗಳ ತರಾಟೆ

ಅನುಜ್ ಕುಮಾರ್ ಚೌಧರಿ | PC : NDTV
ಲಕ್ನೋ: ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ. ಹೀಗಾಗಿ ಮುಸ್ಲಿಮರಿಗೆ ಹೋಳಿ ಬಣ್ಣಗಳು ಇಷ್ಟವಾಗದಿದ್ದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಸಂಭಲ್ನ ಡಿಎಸ್ಪಿ ಅನುಜ್ ಕುಮಾರ್ ಚೌಧರಿ ಹೇಳಿದ್ದರು. ಪೊಲೀಸ್ ಅಧಿಕಾರಿಯೋರ್ವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ, ಉತ್ತರ ಪ್ರದೇಶದ ಮಾಜಿ ಹಿರಿಯ ಪೊಲೀಸ್ ಅಧಿಕಾರಿಗಳು ಡಿಎಎಸ್ಪಿಯ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಡಿಎಸ್ಪಿಯ ಹೇಳಿಕೆಯು ರಾಜ್ಯದಲ್ಲಿ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಲಿದ್ದು, ಮುಖ್ಯಮಂತ್ರಿ ಇಂತಹ ಹೇಳಿಕೆಯನ್ನು ಬೆಂಬಲಿಸುವುದು ದುರದೃಷ್ಟಕರವಾದುದು ಎಂದು ಹಲವು ಹಿರಿಯ ಅಧಿಕಾರಿಗಳು ಕಳವಳವನ್ನು ವ್ಯಕ್ತಪಡಿಸಿದರು.
ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಸುಲ್ಖಾನ್ ಸಿಂಗ್ ಈ ಹೇಳಿಕೆಯನ್ನು ಕಾನೂನುಬಾಹಿರ ಎಂದು ಹೇಳಿದ್ದು, ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಡಿಎಸ್ಪಿಯವರ ಈ ಹೇಳಿಕೆ ಕಾನೂನುಬಾಹಿರವಾಗಿದೆ. ನಿಯಮಗಳನ್ನು ಪಾಲಿಸುವಂತೆ ಜನರಿಗೆ ನಿರ್ದೇಶನ ನೀಡುವ ಬದಲು ಈ ಅಧಿಕಾರಿ ಜನರಿಗೆ ತೊಂದರೆ ಕೊಡಲು ಪ್ರೋತ್ಸಾಹಿಸಿದರು. ಇಂತಹ ಬೇಜವಾಬ್ದಾರಿ ಮತ್ತು ಕಾನೂನುಬಾಹಿರ ನಡವಳಿಕೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾನೂನಿನ ಪ್ರಕಾರ ಯಾರೂ ಒಪ್ಪಿಗೆಯಿಲ್ಲದೆ ಯಾರ ಮೇಲೂ ಬಣ್ಣ ಅಥವಾ ನೀರು ಅಥವಾ ಏನನ್ನೂ ಎಸೆಯುವಂತಿಲ್ಲ. ನಿಯಮಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಅನುಸರಿಸಲಾಗಿದೆಯೆ ಎಂದು ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಉಲ್ಲಂಘನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ಧಾರಿಯಾಗಿದೆ. ಆದರೆ, ಅವರು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಸುಲ್ಖಾನ್ ಸಿಂಗ್ ಹೇಳಿದರು.
ಸಿಎಂ ಆದಿತ್ಯನಾಥ್ ಅವರು ಡಿಎಸ್ಪಿ ಹೇಳಿಕೆಯನ್ನು ಬೆಂಬಲಿಸಿರುವ ಬಗ್ಗೆ ಕೇಳಿದಾಗ, ಸಿಎಂ ಅವರು ನನ್ನ ಬಾಸ್ ಆಗಿದ್ದರಿಂದ ಅವರ ಹೇಳಿಕೆಯ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಆದರೆ ಕಾನೂನುಬಾಹಿರತೆ ಅಥವಾ ಜನರನ್ನು ಅಪರಾಧ ಮಾಡುವಂತೆ ಪ್ರಚೋದಿಸುವುದನ್ನು ಪ್ರೋತ್ಸಾಹಿಸಲಾಗುವುದಿಲ್ಲ ಎಂದು ಸುಲ್ಖಾನ್ ಸಿಂಗ್ ಹೇಳಿದರು.
ಮತ್ತೋರ್ವ ನಿವೃತ್ತ ಡಿಜಿ ಶ್ರೇಣಿಯ ಅಧಿಕಾರಿ ವಿಭೂತಿ ನಾರಾಯಣ ರೈ ಪ್ರತಿಕ್ರಿಯಿಸಿ, ಯಾವುದೇ ವೃತ್ತಿಪರ ಪೊಲೀಸ್ ಅಧಿಕಾರಿ ಇಂತಹ ಹೇಳಿಕೆ ನೀಡಬಾರದಿತ್ತು. ಡಿಎಸ್ಪಿ ಅನುಜ್ ತನ್ನ ಹೇಳಿಕೆ ಮೂಲಕ ಸರಕಾರಕ್ಕೆ ನಿಷ್ಠೆಯನ್ನು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅಧಿಕಾರಿಯ ಹೇಳಿಕೆಗಳು ಉತ್ತರ ಪ್ರದೇಶದಲ್ಲಿ ರಾಜಕೀಯ ಧ್ರುವೀಕರಣವನ್ನು ಹೆಚ್ಚಿಸುತ್ತವೆ. ಮುಖ್ಯಮಂತ್ರಿಗಳು ದುರದೃಷ್ಟವಶಾತ್ ಅವರನ್ನು ಬೆಂಬಲಿಸಿ ಗೊಂದಲವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.