ಉತ್ತರ ಪ್ರದೇಶದಲ್ಲಿ 3,706 ಕೋಟಿ ರೂ.ಗಳ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸಂಪುಟದ ಅನುಮೋದನೆ

PC : PTI
ಹೊಸದಿಲ್ಲಿ: ಕೇಂದ್ರ ಸಂಪುಟವು ಭಾರತದ ಆರನೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಬುಧವಾರ ಅನುಮೋದನೆಯನ್ನು ನೀಡಿದೆ. 3,706 ಕೋಟಿ ರೂ.ಗಳ ಈ ಯೋಜನೆಯನ್ನು ಎಚ್ಸಿಎಲ್ ಮತ್ತು ಫಾಕ್ಸ್ಕಾನ್ ನಡುವೆ ಜಂಟಿ ಉದ್ಯಮವಾಗಿ ಉತ್ತರ ಪ್ರದೇಶದ ಜೇವರ್ನಲ್ಲಿ ಸ್ಥಾಪಿಸಲಾಗುವುದು.
ಸ್ಥಾವರವು 2017ರಿಂದ ಉತ್ಪಾದನೆಯನ್ನು ಆರಂಭಿಸಲಿದ್ದು,ಮೊಬೈಲ್ ಫೋನ್ಗಳು,ಲ್ಯಾಪ್ ಟಾಪ್ಗಳು,ಆಟೊಮೊಬೈಲ್ಗಳು ಮತ್ತು ಪರ್ಸನಲ್ ಕಂಪ್ಯೂಟರ್(ಪಿಸಿ)ಗಳಿಗಾಗಿ ಡಿಸ್ ಪ್ಲೇ ಡ್ರೈವರ್ ಚಿಪ್ ಗಳನ್ನು ತಯಾರಿಸಲಿದೆ.
ಸ್ಥಾವರವನ್ನು ಮಾಸಿಕ 20,000ಗಳಷ್ಟು ವೇಫರ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು,ಇದು ಸೆಮಿಕಂಡಕ್ಟರ್ ನ ಇಂಟಿಗ್ರೇಟೆಡ್ ಸರ್ಕ್ಯೂಟ್ ಗಳ ಮುಖ್ಯಭಾಗವಾಗಿದೆ. ವಿನ್ಯಾಸದ ಮಾಸಿಕ ಉತ್ಪಾದನಾ ಸಾಮರ್ಥ್ಯವು 36 ಮಿಲಿಯನ್ ಯೂನಿಟ್ ಗಳಾಗಿವೆ
ಐದು ಸೆಮಿಕಂಡಕ್ಟರ್ ಘಟಕಗಳು ಈಗಾಗಲೇ ನಿರ್ಮಾಣ ಹಂತದಲ್ಲಿವೆ. ಈಗ ಈ ಆರನೇ ಘಟಕದೊಂದಿಗೆ ವ್ಯೆಹಾತ್ಮಕವಾಗಿ ಮುಖ್ಯವಾಗಿರುವ ಸೆಮಿಕಂಡಕ್ಟರ್ ಉದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟನಲ್ಲಿ ಭಾರತವು ಮುಂದುವರಿಯುತ್ತಿದೆ ಎಂದು ಕೇಂದ್ರ ಸರಕಾರವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಸೆಮಿಕಂಡಕ್ಟರ್ ಉದ್ಯಮವು ಈಗ ದೇಶಾದ್ಯಂತ ರೂಪುಗೊಳ್ಳುತ್ತಿದೆ, ದೇಶದ ಹಲವಾರು ರಾಜ್ಯಗಳಲ್ಲಿ ವಿಶ್ವದರ್ಜೆಯ ವಿನ್ಯಾಸ ಸೌಲಭ್ಯಗಳು ತಲೆಯೆತ್ತಿವೆ,ರಾಜ್ಯ ಸರಕಾರಗಳು ವಿನ್ಯಾಸ ಸಂಸ್ಥೆಗಳಿಗೆ ಹೆಚ್ಚಿನ ಬೆಂಬಲ ನೀಡುತ್ತಿವೆ ಎಂದೂ ಹೇಳಿಕೆಯು ತಿಳಿಸಿದೆ.