ಉತ್ತರ ಪ್ರದೇಶ | ವಾಹನ ಢಿಕ್ಕಿ ಹೊಡೆಸಿ ಹೆಡ್ ಕಾನ್ಸ್ಟೆಬಲ್ ಹತ್ಯೆಗೈದ ಶಂಕಿತ ಅಕ್ರಮ ಗೋವು ಸಾಗಾಟಗಾರರು
ಗುಂಡಿನ ಕಾಳಗದಲ್ಲಿ ಓರ್ವ ಸಾವು, ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೊ: ಉತ್ತರಪ್ರದೇಶದ ಜೌನ್ಪುರ ಜಿಲ್ಲೆಯಲ್ಲಿ ಪೊಲೀಸರು ಹಾಗೂ ಶಂಕಿತ ಅಕ್ರಮ ಗೋವು ಸಾಗಾಟಗಾರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಶಂಕಿತ ಅಕ್ರಮ ಗೋವು ಸಾಗಾಟಗಾರ ಸಾವನ್ನಪ್ಪಿದ್ದಾನೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಮೇ 14ರಂದು ತಡ ರಾತ್ರಿ ಶಂಕಿತ ಅಕ್ರಮ ಗೋವು ಸಾಗಾಟಗಾರರು ಜಲಾಲ್ಪುರ (ಜೌನ್ಪುರ ಜಿಲ್ಲೆ) ಪೊಲೀಸ್ ಠಾಣಾ ವ್ಯಾಪ್ತಿಯ ಪರೌಗಂಜ್ ಪೊಲೀಸ್ ಹೊರ ಠಾಣೆಯಲ್ಲಿ ಉಸ್ತುವಾರಿಯಾಗಿದ್ದ ಪ್ರತಿಮಾ ಸಿಂಗ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ತಮ್ಮ ವಾಹನವನ್ನು ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿದ್ದಾರೆ. ಇದರಿಂದ ಪ್ರತಿಮಾ ಸಿಂಗ್ ಗಂಭೀರ ಗಾಯಗೊಂಡರು. ಅವರು ವಾರಣಾಸಿಯ ತುರ್ತು ಚಿಕಿತ್ಸೆ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಉತ್ತರಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಯಲ್ಲಿ ಜಿಲ್ಲೆಯಾದ್ಯಂತ ಅಕ್ರಮ ಗೋವು ಸಾಗಾಟಗಾರರ ವಿರುದ್ಧ ತಪಾಸಣಾ ಅಭಿಯಾನ ನಡೆಸುವಂತೆ ಸೂಚನೆ ನೀಡಲಾಗಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಚಂದ್ವಾಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತ್ಯ ಪ್ರಕಾಶ್ ಸಿಂಗ್ ಹಾಗೂ ಇತರ ಸಿಬ್ಬಂದಿ ಖುಜ್ಜಿ ತಿರುವಿನಲ್ಲಿ ಮೇ 17ರಂದು ತಪಾಸಣೆ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ತಂಡ ರಾತ್ರಿ 11.30ಕ್ಕೆ ವಾರಣಾಸಿಯಿಂದ ಅಝಂಗಢಕ್ಕೆ ತೆರಳುತ್ತಿದ್ದ ಪಿಕ್ ಅಪ್ ವಾಹನದಲ್ಲಿ ತೆರಳುತ್ತಿದ್ದ ಗೋವು ಅಕ್ರಮ ಸಾಗಾಟಗಾರರನ್ನು ತಡೆದು ನಿಲ್ಲಿಸಿತು.
ಈ ಸಂದರ್ಭ ಅಕ್ರಮ ಗೋವು ಸಾಗಾಟಗಾರರು ಪಿಕ್ ಅಪ್ ವಾಹನವನ್ನು ಹೆಡ್ ಕಾನ್ಸ್ಟೆಬಲ್ ದುರ್ಗೇಶ್ ಕುಮಾರ್ (34) ಅವರಿಗೆ ಢಿಕ್ಕಿ ಹೊಡೆಸಿ ವಾರಣಾಸಿಯತ್ತ ಪರಾರಿಯಾದರು. ಇದರಿಂದ ಗಂಭೀರ ಗಾಯಗೊಂಡ ಹೆಡ್ ಕಾನ್ಸ್ಟೆಬಲ್ ದುರ್ಗೇಶ್ ಕುಮಾರ್ ಅವರನ್ನು ವಾರಣಾಸಿಯ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಚಿಕಿತ್ಸೆ ವೇಳೆ ಮೃತಪಟ್ಟರು ಎಂದು ಅವರು ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಇಡೀ ಪೊಲೀಸ್ ಪಡೆ ಆಗಮಿಸಿತು. ವಿಶೇಷ ಕಾರ್ಯಾಚರಣೆ ಗುಂಪಿನೊಂದಿಗೆ (ಎಸ್ಒಜಿ) ಸಮೀಪದ ಪೊಲೀಸ್ ಠಾಣೆಯ ಸಿಬ್ಬಂದಿ ಗೋವು ಅಕ್ರಮ ಸಾಗಾಟಗಾರರನ್ನು ಬೆನ್ನಟ್ಟಿದರು. ಪೊಲೀಸರ ತಂಡ ವಾರಣಾಸಿ ಜಿಲ್ಲೆಯ ಚೋಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಾಲಾ ಬೇಲಾ ಗ್ರಾಮಕ್ಕೆ ತಲುಪಿದಾಗ ಶಂಕಿತ ಅಕ್ರಮ ಗೋವು ಸಾಗಾಟಗಾರರು ಪಿಕ್ ಅಪ್ ವಾಹನವನ್ನು ತ್ಯಜಿಸಿ ಎರಡು ಮೋಟಾರು ಸೈಕಲ್ ನಲ್ಲಿ ಜೌನ್ ಪುರದ ಚಂದ್ ವಾಕ್ ನತ್ತ ತೆರಳಿದರು. ಚಂದ್ವಾಕ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಶಂಕಿತ ಅಕ್ರಮ ಗೋವು ಸಾಗಾಟಗಾರರು ಪೊಲೀಸರ ತಂಡದ ಮೇಲೆ ಗುಂಡು ಹಾರಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಜೌನ್ ಪುರದ ನಿವಾಸಿ ಸಲ್ಮಾನ್ (14) ಮೃತಪಟ್ಟ ಎಂದು ಕುಮಾರ್ ತಿಳಿಸಿದ್ದಾರೆ.
ಮತ್ತಿಬ್ಬರು ಅಕ್ರಮ ಗೋವು ಸಾಗಾಟಗಾರರಾದ ಚಂಡೌಲಿ ಜಿಲ್ಲೆಯ ಗೋಲು ಹಾಗೂ ವಾರಣಾಸಿಯ ನರೇಂದ್ರ ಯಾದವ್ ಅವರನ್ನು ಬಂಧಿಸಲಾಯಿತು. ಇತರ ಮೂವರು ಶಂಕಿತ ಅಕ್ರಮ ಗೋವು ಸಾಗಾಟಗಾರರಾದ ರಾಹುಲ್ ಯಾದವ್, ರಾಜು ಯಾದವ್ ಹಾಗೂ ಅಝಾದ್ ಯಾದವ್ ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರ ತಂಡವೊಂದನ್ನು ನಿಯೋಜಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.







