ಉತ್ತರ ಪ್ರದೇಶ| ಪುತ್ರಿ ನಾಪತ್ತೆಯಾದ ಕೆಲವೇ ದಿನಗಳಲ್ಲಿ ತಂದೆಯೂ ನಾಪತ್ತೆ: ಪೊಲೀಸರಿಂದ ಶೋಧ

ಸಾಂದರ್ಭಿಕ ಚಿತ್ರ | PC : freepik.com
ಗೋರಖ್ ಪುರ್: ಮೂರು ದಿನಗಳ ಹಿಂದೆ ಪಿಪ್ರೈಚ್ ಪ್ರದೇಶದಿಂದ ತನ್ನ ಮೂರು ವರ್ಷದ ಪುತ್ರಿ ನಾಪತ್ತೆಯಾದ ನಂತರ, ಆ ಬಾಲಕಿಯ ತಂದೆ ಕೂಡಾ ನಾಪತ್ತೆಯಾಗಿದ್ದಾರೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 6.30ರ ವೇಳೆಗೆ ಪಿಪ್ರೈಚ್ ನ ಅಂಬೇಡ್ಕರ್ ನಗರ ವಾರ್ಡ್ ನಂಬರ್ 4ರಲ್ಲಿರುವ ಅಜ್ಜಿ-ತಾತನ ಮನೆಯಿಂದ ನಿತ್ಯಾ ಎಂಬ ಮೂರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಆಕೆಗಾಗಿ ಎಷ್ಟೇ ಹುಡುಕಾಟ ನಡೆಸಿದರೂ, ಆಕೆಯ ಸುಳಿವು ದೊರೆತಿರಲಿಲ್ಲ. ಇದರ ಬೆನ್ನಿಗೇ, ರವಿವಾರ ಆಕೆಯ ತಂದೆ ಜೋಗೇಂದ್ರ ಕೂಡಾ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ನಿತ್ಯಾ ನಾಪತ್ತೆಯಾದಾಗಿನಿಂದ ಅನುಮಾನಾಸ್ಪದ ವರ್ತನೆ ತೋರಿದ್ದ ಜೋಗೇಂದ್ರ, ವಿವಿಧ ನೆಪಗಳನ್ನು ಮುಂದೊಡ್ಡಿ, ಶೋಧ ಕಾರ್ಯಾಚರಣೆಯಿಂದ ಅಂತರ ಕಾಯ್ದುಕೊಂಡಿದ್ದ ಎಂದು ಹೇಳಲಾಗಿದೆ. ನಂತರ, ರವಿವಾರ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ಆತ, ಇಲ್ಲಿಯವರೆಗೆ ಕಂಡು ಬಂದಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀ ವಾಸ್ತವ, “ಆತ ದಿಢೀರನೆ ಕಾಣೆಯಾಗಿರುವುದು ಹಲವು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ. ನಾವೀಗ ಇದನ್ನು ಅವಳಿ ನಾಪತ್ತೆ ಪ್ರಕರಣ ಎಂದು ಪರಿಗಣಿಸಿದ್ದು, ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಜೋಗೇಂದ್ರ ಎಲ್ಲಿದ್ದಾನೆ ಎಂಬ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ ಎಂದು ಆತನ ಪತ್ನಿ ರಾಧಿಕಾ ಹಾಗೂ ಆತನ ಅತ್ತೆ ಗೀತಾ ದೇವಿ ಹೇಳಿದ್ದಾರೆ.
ಜೋಗೇಂದ್ರನ ಸ್ಥಳೀಯ ಗ್ರಾಮವಾದ ಕುಶಿನಗರ ಜಿಲ್ಲೆಯ ಬೋಲ್ಚಾಗೆ ಇನ್ಸ್ ಪೆಕ್ಟರ್ ಪುರುಷೋತ್ತಮ್ ಆನಂದ್ ಸಿಂಗ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿದಾಗಲೂ, ಆತನ ಗ್ರಾಮಸ್ಥರೂ ಆತನ ಇರುವಿಕೆಯ ಬಗ್ಗೆ ನಮಗೇನೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ಕಾಣೆಯಾಗಿರುವ ಜೋಗೇಂದ್ರನನ್ನು ಪತ್ತೆ ಹಚ್ಚಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. “ಮಗುವನ್ನು ಶೀಘ್ರವೇ ಪತ್ತೆ ಹಚ್ಚುವ ವಿಶ್ವಾಸ ನಮಗಿದೆ. ಯಾವುದೇ ಬಗೆಯ ತನಿಖಾ ಸ್ವರೂಪವನ್ನೂ ತಳ್ಳಿ ಹಾಕುವುದಿಲ್ಲ” ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀವಾಸ್ತವ ಸ್ಪಷ್ಟಪಡಿಸಿದ್ದಾರೆ.