ಉತ್ತರಪ್ರದೇಶ | ಅಂತರ್ ಜಾತಿ ವಿವಾಹವಾದ ಮಹಿಳೆಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ : 20 ಲಕ್ಷ ರೂ.ದಂಡ

ಸಾಂದರ್ಭಿಕ ಚಿತ್ರ | PC : freepik.com
ಲಕ್ನೊ: ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಬಛೆಡಾ ಗ್ರಾಮದಲ್ಲಿ ಯಾದವ್ ಸಮುದಾಯಕ್ಕೆ ಸೇರಿದ ಮಹಿಳಾ ಕಾನ್ಸ್ಟೆಬಲ್ ಓರ್ವರು ಪಟೇಲ್ ಸಮುದಾಯಕ್ಕೆ ಸೇರಿದ ತನ್ನ ಬಾಲ್ಯದ ಗೆಳೆಯನಾದ ಇನ್ಸ್ಪೆಕ್ಟರ್ರನ್ನು ವಿವಾಹವಾಗಿರುವುದು ಸವರ್ಣೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಎರಡೂ ಕಡೆಯ ಕುಟುಂಬದವರು ಈ ಸಂಬಂಧಕ್ಕೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಪ್ರಿಲ್ 30ರಂದು ವಿವಾಹ ನಡೆದಿತ್ತು. ಆದರೆ, ಅಂತರ್ಜಾತಿ ಸಂಬಂಧವಾಗಿರುವುದರಿಂದ ಗ್ರಾಮಸ್ಥರು ಈ ವಿವಾಹವನ್ನು ತಿರಸ್ಕರಿಸಿದ್ದಾರೆ. ಈ ವಿವಾಹದಿಂದ ಆಕ್ರೋಶಿತರಾಗಿರುವ ಗ್ರಾಮಸ್ಥರು ಮೇ 13ರಂದು ಗ್ರಾಮ ಪಂಚಾಯತ್ ಕರೆದು, ಅಲ್ಲಿ ಈ ಅಂತರ್ ಜಾತಿ ವಿವಾಹ ಸ್ವೀಕಾರಾರ್ಹವಲ್ಲ ಎಂದು ಘೋಷಿಸಿದ್ದಾರೆ.
ಗ್ರಾಮದ ಮುಖ್ಯಸ್ಥ ಸೇರಿದಂತೆ ಗ್ರಾಮದ ಹಿರಿಯರು ರಹಸ್ಯ ಸಭೆ ನಡೆಸಿ ಸಾಮಾಜಿಕ ನಿಯಮಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಮಹಿಳೆಯ ಕುಟುಂಬಕ್ಕೆ 20 ಲಕ್ಷ ರೂ. ಭಾರೀ ದಂಡ ವಿಧಿಸಿದ್ದಾರೆ. ಮಹಿಳೆಯ ಕುಟುಂಬದೊಂದಿಗೆ ಮಾತನಾಡುವ ಅಥವಾ ವಹಿವಾಟು ನಡೆಸುವರಿಗೆ 50 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿದ್ದಾರೆ.
ಪಂಚಾಯತ್ನ ಆಜ್ಞೆಯ ಹಿನ್ನೆಲೆಯಲ್ಲಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವುದರಿಂದ ಬದುಕು ನಿಶ್ಚಲಗೊಂಡಿದೆ ಎಂದು ಸಣ್ಣ ಡೈರಿ ವ್ಯವಹಾರ ನಡೆಸುತ್ತಿರುವ ಯುವತಿಯ ಹೆತ್ತವರು ಹೇಳಿದ್ದಾರೆ.
ಗ್ರಾಮಸ್ಥರು ಈ ಕುಟುಂಬದೊಂದಿಗಿನ ಎಲ್ಲಾ ರೀತಿಯ ಸಂವಹನವನ್ನು ನಿಲ್ಲಿಸಿದ್ದಾರೆ. ಆಜ್ಞೆ ವಿಧಿಸಿದ ಬಳಿಕ ಒಂದೇ ಒಂದು ಗ್ರಾಹಕರು ಅವರ ಡೈರಿಗೆ ಬರುತ್ತಿಲ್ಲ. ಇದರಿಂದ ಅವರ ಹಾಲು ಮಾರಾಟವಾಗದೆ ಉಳಿದಿದೆ.
ಈ ನಡುವೆ ಯುವತಿಯ ತಾಯಿ, ‘‘ದಂಡದ ಮೊತ್ತ ನಮ್ಮ ಸಾಮರ್ಥ್ಯಕ್ಕೆ ಮೀರಿದು. ಪ್ರತಿ ದಿನಕ್ಕೆ ಶೇ. 3 ಬಡ್ಡಿ ನೀಡಬೇಕು ಎಂದು ಕೂಡ ನಮಗೆ ಸೂಚಿಸಲಾಗಿದೆ. ನಾವು ಬಡ ಜನರು. ನಾವು 20 ಲಕ್ಷ ರೂ. ಪಾವತಿಸುವುದು ಹೇಗೆ? ನನ್ನ ಪುತ್ರಿ ವಿವಾಹವಾಗಿ ಸಂತೋಷದಿಂದ ಇದ್ದಾಳೆ. ನಾವೇನು ತಪ್ಪು ಮಾಡಿದ್ದೇವೆ’’ ಎಂದು ಪ್ರಶ್ನಿಸಿದ್ದಾರೆ.
ಮೇ 31ರಂದು ನಿರ್ಬಂಧ ವಿಧಿಸಿದ ಬಳಿಕ ಯುವತಿಯ ಕುಟುಂಬ ನೆರವಿಗಾಗಿ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವ ಬದಲು, ಅವರನ್ನು ಸಮಾಧಾನಪಡಿಸಿ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.







