ಉತ್ತರಪ್ರದೇಶ | ಕಾರ್ಯಕರ್ತೆ ಜೊತೆಗಿನ ಅಶ್ಲೀಲ ವೀಡಿಯೊ ವೈರಲ್ : ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ

PC : ಕಿಶೋರ ಕಶ್ಯಪ್
ಗೊಂಡಾ: ಬಿಜೆಪಿಯ ಗೊಂಡಾ ಜಿಲ್ಲಾಧ್ಯಕ್ಷ ಅಮರ ಕಿಶೋರ ಕಶ್ಯಪ್ ಮಹಿಳಾ ಕಾರ್ಯಕರ್ತೆಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಬುಧವಾರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ನೀವು ಒದಗಿಸಿರುವ ವಿವರಣೆ ತೃಪ್ತಿಕರವಾಗಿಲ್ಲ ಮತ್ತು ನಿಮ್ಮ ನಡವಳಿಕೆಯು ತುಂಬ ಅಶಿಸ್ತಿನದಾಗಿದೆ. ಆದ್ದರಿಂದ ರಾಜ್ಯಧ್ಯಕ್ಷರ ಸೂಚನೆಯ ಮೇರೆಗೆ ನಿಮ್ಮನ್ನು ತಕ್ಷಣವೇ ಜಾರಿಗೆ ಬರುವಂತೆ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬುಧವಾರ ಕಶ್ಯಪ್ಗೆ ನೀಡಿರುವ ಪತ್ರದಲ್ಲಿ ತಿಳಿಸಲಾಗಿದೆ.
ಎಪ್ರೀಲ್ 12, 2025ರಂದು ಬಿಜೆಪಿ ಕಚೇರಿಯಲ್ಲಿನ ಸಿಸಿಟಿವಿ ಕ್ಯಾಮರಾದ ಮೂಲಕ ರೆಕಾರ್ಡ್ ಮಾಡಲಾಗಿದ್ದ ವಿವಾದಾತ್ಮಕ ವೀಡಿಯೊ ಮೇ ಅಂತ್ಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು ಎಂದು ಪೋಲಿಸ್ ಮೂಲಗಳು ತಿಳಿಸಿವೆ.
ರಾತ್ರಿ 9:34ಕ್ಕೆ ಕಶ್ಯಪ್ ಮಹಿಳೆಯೊಂದಿಗೆ ಕಾರಿನಿಂದಿಳಿದು ಬಿಜೆಪಿ ಕಚೇರಿಯನ್ನು ಪ್ರವೇಶಿಸುತ್ತಿದ್ದಾಗ ಮೆಟ್ಟಿಲುಗಳ ಮೇಲೆ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದನ್ನು ವೀಡಿಯೊ ತೋರಿಸಿದೆ.
ಈ ಕುರಿತು ಮಹಿಳೆ ಛಾಪಿಯಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನ್ನ ಮತ್ತು ಕಶ್ಯಪ್ ಅವರ ಪ್ರತಿಷ್ಠೆಗೆ ಕಳಂಕವನ್ನುಂಟು ಮಾಡುವ ರಾಜಕೀಯ ಪಿತೂರಿಯ ಭಾಗವಾಗಿ ಈ ಕಲ್ಪಿತ ವೀಡಿಯೊವನ್ನು ವೈರಲ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಶ್ಯಪ್ ತನ್ನ ಸೋದರನಂತಿದ್ದಾರೆ ಎಂದು ಹೇಳಿರುವ ಆಕೆ, ತಮ್ಮಿಬ್ಬರ ನಡುವೆ ಯಾವುದೇ ಅನುಚಿತ ಸಂಬಂಧವನ್ನು ನಿರಾಕರಿಸಿದ್ದಾಳೆ. ಪೋಲಿಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.







