ಉತ್ತರಪ್ರದೇಶದ ಗ್ರಾಮದಲ್ಲಿ ‘ವಿಷಕಾರಿ ಚರಂಡಿ’; ಆರೋಗ್ಯ ಸಮಸ್ಯೆಯಿಂದ 15 ದಿನಗಳಲ್ಲಿ 13 ಜನರು ಮೃತ್ಯು

ಸಾಂದರ್ಭಿಕ ಚಿತ್ರ | PTI
ಮೀರತ್: ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬುಧಪುರ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 13 ಜನರು ಸಾವನ್ನಪ್ಪಿದ್ದು, ಹತ್ತಿರದ ಚರಂಡಿಗೆ ವಿಷಕಾರಿ ತ್ಯಾಜ್ಯವನ್ನು ಬಿಡುತ್ತಿರುವುದರಿಂದ ಅಂತರ್ಜಲ ಕಲುಷಿತಗೊಂಡು ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹೆಚ್ಚಾಗಿ ಹೃದಯಾಘಾತ, ಮೂತ್ರಪಿಂಡ ವೈಫಲ್ಯ ಮತ್ತು ಸೋಂಕುಗಳಿಂದ ಸಂಭವಿಸಿರುವ ಸಾವುಗಳು ಗ್ರಾಮಸ್ಥರಲ್ಲಿ ಭೀತಿಯನ್ನುಂಟು ಮಾಡಿದ್ದು, ಆಡಳಿತವು ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.
ತೀರಾ ಇತ್ತೀಚಿಗೆ 70 ವರ್ಷದ ಮಹಿಳೆಯೋರ್ವರು ಯಕೃತ್ ಸಂಬಂಧಿತ ಕಾಯಿಲೆಯಿಂದ ಮೀರತ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ ಮಾಜಿ ಗ್ರಾಮ ಪ್ರಧಾನ ಸುರೇಂದ್ರ ಪಾಲ್ ಸಿಂಗ್ ಅವರು, ಸಕ್ಕರೆ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಮತ್ತು ಸಮೀಪದ ಕಾಲನಿಗಳಿಂದ ಸಂಸ್ಕರಿಸದ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಬರೌತ್ ಪ್ರದೇಶದಲ್ಲಿಯ ಸಕ್ಕರೆ ಕಾರ್ಖಾನೆಗಳು ಹತ್ತಿರದ ಜಲಮೂಲಗಳಿಗೆ ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತಿವೆ. ಇದು ಜಲಚರಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ಹೆಚ್ಚಿನ ಗ್ರಾಮಸ್ಥರಿಗೆ ಜಲ ಶುದ್ಧೀಕರಣ ಯಂತ್ರಗಳನ್ನು ಖರೀದಿಸುವುದು ಸಾಧ್ಯವಿಲ್ಲ. ಈ ಕಲುಷಿತ ನೀರು ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡುತ್ತಿದೆೆ. ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತಿದೆ ಮತ್ತು ಜಾನುವಾರುಗಳಿಗೆ ಮಾರಕವಾಗಿದೆ ಎಂದರು.
‘ಸಮೀಕ್ಷೆಯ ಬಳಿಕ ಒಂಭತ್ತು ಸಾವುಗಳು ದೃಢಪಟ್ಟಿವೆ. ಅವರೆಲ್ಲರೂ ದೀರ್ಘಕಾಲಿಕ ರೋಗಿಗಳಾಗಿದ್ದರು. ವಿಷಯ ಬೆಳಕಿಗೆ ಬಂದ ಬಳಿಕ ನಾವು ವೈದ್ಯಕೀಯ ಶಿಬಿರವನ್ನು ಆಯೋಜಿಸಿ 100ಕ್ಕೂ ಅಧಿಕ ಗ್ರಾಮಸ್ಥರ ತಪಾಸಣೆ ನಡೆಸಿದ್ದೇವೆ. ಈ ವೇಳೆ ಸಾಮಾನ್ಯ ಕಾಯಿಲೆಗಳು ಮಾತ್ರ ಪತ್ತೆಯಾಗಿವೆ ’ಎಂದು ಬರೌತ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಕೀಯ ಅಧೀಕ್ಷಕ ಡಾ.ವಿಜಯ ಕುಮಾರ ತಿಳಿಸಿದರು.
ಇದು ಗಂಭೀರ ಸಮಸ್ಯೆಯಾಗಿದೆ. ಸಕ್ಕರೆ ಕಾಖಾನೆಗಳು ಸಂಸ್ಕರಿಸದ ತ್ಯಾಜ್ಯಗಳನ್ನು ಜಲಮೂಲಗಳಿಗೆ ಸುರಿಯುತ್ತಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾಡಳಿತವನ್ನು ಹೊಣೆಯಾಗಿಸಬೇಕಿದೆ ಎಂದು ಬಾಗಪತ್ ಸಂಸದ ರಾಜಕುಮಾರ್ ಸಾಂಗ್ವಾನ್ ಹೇಳಿದರು.







