ಉತ್ತರಪ್ರದೇಶ | ಶೌಚ ಗುಂಡಿಗೆ ಇಳಿದ ಇಬ್ಬರು ಸ್ವಚ್ಛತಾ ಕಾರ್ಮಿಕರು ಮೃತ್ಯು

ಸಾಂದರ್ಭಿಕ ಚಿತ್ರ
ಮಥುರಾ: ಇಲ್ಲಿನ ವೃಂದಾವನ ನಗರದಲ್ಲಿರುವ ಅತಿಥಿ ಗೃಹವೊಂದರ ಶೌಚ ಗುಂಡಿಯನ್ನು ಸ್ವಚ್ಛಗೊಳಿಸುತ್ತಿರುವ ಸಂದರ್ಭ ವಿಷಾನಿಲ ಸೇವಿಸಿ ಇಬ್ಬರು ಸ್ವಚ್ಛತಾ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಮೃತರನ್ನು ನರೇಂದ್ರ (38) ಹಾಗೂ ಛೋಟೇಲಾ (40) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಶನಿವಾರ ಸಂಜೆ ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಗುತ್ತಿಗೆದಾರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೊರ ಠಾಣೆಯ ಉಸ್ತುವಾರಿ ಕುಲವೀರ್ ಸಿಂಗ್ ತಿಳಿಸಿದ್ದಾರೆ.
ವಿಷಾನಿಲ ಸೇವಿಸಿ ಇಬ್ಬರು ಸ್ವಚ್ಛತಾ ಕಾರ್ಮಿಕರು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಈ ಹಿನ್ನೆಲೆಯಲ್ಲಿ ಮೃತರ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದರು. ಅಧಿಕಾರಿಗಳು ಸೂಕ್ತ ಪರಿಹಾರದ ಭರವಸೆ ನೀಡಿದ ಬಳಿಕ ಅವರು ಸಮಾಧಾನಗೊಂಡರು ಎಂದು ಅವರು ತಿಳಿಸಿದ್ದಾರೆ.
ಇಬ್ಬರೂ ಸ್ವಚ್ಛತಾ ಕಾರ್ಮಿಕರು ಯಾವುದೇ ಸುರಕ್ಷಾ ಸಾಧನಗಳಿಲ್ಲದೆ ಶೌಚ ಗುಂಡಿಗೆ ಇಳಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.





