ಉತ್ತರ ಪ್ರದೇಶ | ‘‘ಗುಣಮಟ್ಟದ’’ ರೀಲ್ಸ್ ತಯಾರಿಸಲು ಐಫೋನ್ ಗಾಗಿ ಬೆಂಗಳೂರಿನ ಯುವಕನ ಕೊಲೆ; ಇಬ್ಬರು ಬಾಲಕರ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರಪ್ರದೇಶದ ಬಹ್ರಾಯಿಕ್ ಜಿಲ್ಲೆಯಲ್ಲಿ ನಡೆದ ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ, ಸಾಮಾಜಿಕ ಮಾಧ್ಯಮಗಳಿಗಾಗಿ ‘‘ಉತ್ತಮ ಗುಣಮಟ್ಟದ ರೀಲ್ಸ್’’ಗಳನ್ನು ತಯಾರಿಸಲು ಐಫೋನ್ ಗಾಗಿ ಇಬ್ಬರು ಅಪ್ರಾಪ್ತ ವಯಸ್ಸಿನವರು 19 ವರ್ಷದ ವ್ಯಕ್ತಿಯೊಬ್ಬನನ್ನು ಕೊಂದಿದ್ದಾರೆ.
ಹದಿಹರಯದ ಆರೋಪಿಗಳು ಸಂತ್ರಸ್ತನ ಕತ್ತು ಸೀಳಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ.
ಸಂತ್ರಸ್ತ ಯುವಕನನ್ನು ಬೆಂಗಳೂರು ನಿವಾಸಿ ಶಾದಾಬ್ (19) ತನ್ನ ಮಾವನ ಮದುವೆಗೆ ಹಾಜರಾಗುವುದಕ್ಕಾಗಿ ತನ್ನ ಹಿರಿಯರ ಊರು ಬಹ್ರೈಕ್ ನ ನಾಗೌರ್ ಗೆ ಹೋಗಿದ್ದರು. ಜೂನ್ 20ರ ರಾತ್ರಿ ಕೊಲೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ರಮಾನಂದ್ ಪ್ರಸಾದ್ ಕುಶ್ವಾಹ ತಿಳಿಸಿದರು.
‘‘ಶಾದಾಬ್ ಕಾಣೆಯಾಗಿದ್ದಾರೆ ಎಂಬ ದೂರನ್ನು ಜೂನ್ 21ರಂದು ಸಲ್ಲಿಸಲಾಯಿತು. ಗ್ರಾಮದ ಹೊರವಲಯದಲ್ಲಿರುವ ಪೇರಳೆ ಹಣ್ಣಿನ ತೋಟವೊಂದರಲ್ಲಿರುವ ಹಳೆಯ ಬೋರ್ವೆಲ್ ಒಂದರ ಸಮೀಪ ಅವರ ಮೃತದೇಹವನ್ನು ಅದೇ ದಿನ ಸಂಜೆ ಪತ್ತೆಹಚ್ಚಲಾಯಿತು. ಶಾದಾಬ್ ರ ಕತ್ತನ್ನು ಚಾಕುನಿಂದ ಸೀಳಲಾಗಿತ್ತು ಮತ್ತು ಅವರ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು’’ ಎಂದು ಅವರು ಪಿಟಿಐಗೆ ತಿಳಿಸಿದರು.
ಪೊಲೀಸರು ಶನಿವಾರ 14 ಮತ್ತು 16 ವರ್ಷ ವಯಸ್ಸಿನ ಇಬ್ಬರನ್ನು ಬಂಧಿಸಿದರು.
‘‘ವಿಚಾರಣೆಯ ವೇಳೆ, ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಒಳ್ಳೆಯ ಗುಣಮಟ್ಟದ ರೀಲ್ಸ್ ಗಳನ್ನು ಮಾಡುವುದಕ್ಕಾಗಿ ತಮಗೆ ಒಳ್ಳೆಯ ಮೊಬೈಲ್ ಫೋನ್ ಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ಶಾದಬ್ ನಲ್ಲಿರುವ ಐಫೋನ್ ಪಡೆಯುವುದಕ್ಕಾಗಿ ಅವರನ್ನು ಕೊಲೆಗೈಯುವ ಸಂಚನ್ನು ನಾಲ್ಕು ದಿನಗಳ ಮೊದಲೇ ರೂಪಿಸಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘‘ಕೊಲೆ ನಡೆದ ರಾತ್ರಿ, ಆರೋಪಿಗಳು ರೀಲ್ಸ್ ಮಾಡುವ ನೆವದಿಂದ ಶಾದಾಬ್ ರನ್ನು ಗ್ರಾಮದ ಹೊರವಲಯಕ್ಕೆ ಕರೆದೊಯ್ದರು. ಅಲ್ಲಿ ಅವರು ಶಾದಾಬ್ ಮೇಲೆ ದಾಳಿ ನಡೆಸಿದರು. ಮೊದಲು ಚಾಕುನಿಂದ ಅವರ ಕತ್ತು ಸೀಳಿದರು ಮತ್ತು ಬಳಿಕ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿದರು’’ ಎಂದು ಅವರು ನುಡಿದರು.
ಶಾದಾಬ್ ರ ಐಫೋನ್ ಮತ್ತು ಕೊಲೆಯಲ್ಲಿ ಬಳಸಲಾಗಿರುವ ಚಾಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.







