ಉತ್ತರಪ್ರದೇಶ: ದೇವಸ್ಥಾನ ಪ್ರವೇಶಿಸಿದ ದಲಿತ ಯುವಕನಿಗೆ ಅರ್ಚಕನಿಂದ ಹಲ್ಲೆ
ಆತ ನನ್ನ ಸೊಸೆಗೆ ಲೈಂಗಿಕ ಪೀಡನೆ ನೀಡಿದ: ಪ್ರತಿದೂರು

ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವ ಲೋದೇಶ್ವರ್ ಮಹಾದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವುದರಿಂದ ತನ್ನನ್ನು ಅಲ್ಲಿನ ಅರ್ಚಕ ತಡೆದಿದ್ದಾರೆ ಎಂದು ದಲಿತ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಅರ್ಚಕನು ತನ್ನ ಕುಟುಂಬ ಸದಸ್ಯರೊಂದಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದು, ಜಾತಿನಿಂದನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಲ್ಲೆಗೊಳಗಾದ ಶೈಲೇಂದ್ರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನಿಖೆ ನಡೆಯುತ್ತಿದೆ ಎಂದು ರಾಮನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಅನಿಲ್ ಕುಮಾರ್ ಪಾಂಡೆ ಶುಕ್ರವಾರ ಹೇಳಿದರು. ದೇವಸ್ಥಾನದ ಒಳಗೆ ನಡೆದ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಮತ್ತು ಅರ್ಚಕನ ಹೇಳಿಕೆಯನ್ನು ಪಡೆದ ಬಳಿಕ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಅರ್ಚಕ ಆದಿತ್ಯ ತಿವಾರಿ, ಅವರ ಕುಟುಂಬ ಸದಸ್ಯರಾದ ಅಖಿಲ್ ತಿವಾರಿ ಮತ್ತು ಶುಭಮ್ ತಿವಾರಿ ನಾನು ದೇವಸ್ಥಾನದ ಒಳಗೆ ಹೋಗುವುದನ್ನು ತಡೆದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶೈಲೇಂದ್ರ ಆರೋಪಿಸಿದ್ದಾರೆ. ಅದನ್ನು ನಾನು ಪ್ರಶ್ನಿಸಿದಾಗ ಅವರು ನನ್ನ ವಿರುದ್ಧ ಜಾತಿನಿಂದನೈಗೈದರು ಹಾಗೂ ಪಾತ್ರೆ ಮತ್ತು ಗಂಟೆಯಿಂದ ಹೊಡೆದರು ಎಂದು ಸಂತ್ರಸ್ತ ದೂರಿದ್ದಾರೆ.
ಗಾಯಗೊಂಡ ಶೈಲೇಂದ್ರರನ್ನು ಮೊದಲು ರಾಮನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು ಹಾಗೂ ಬಳಿಕ ಅಲ್ಲಿಂದ ಬಾರಾಬಂಕಿಯ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು.
ಇದಕ್ಕೆ ಪ್ರತಿದೂರು ಸಲ್ಲಿಸಿರುವ ಅರ್ಚಕ ಆದಿತ್ಯ ತಿವಾರಿ, ಶೈಲೇಂದ್ರ ನನ್ನ ಸೊಸೆಗೆ ಲೈಂಗಿಕ ಪೀಡನೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
‘‘ನನ್ನ ಮಗ ಮತ್ತು ಸೊಸೆ ದೇವಸ್ಥಾನದ ಒಳಗೆ ಪ್ರಾರ್ಥಿಸುತ್ತಿದ್ದರು. ಆಗ ಶೈಲೇಂದ್ರ ನನ್ನ ಸೊಸೆಗೆ ಲೈಂಗಿಕ ಪೀಡನೆ ನೀಡಲು ಆರಂಭಿಸಿದನು. ಅದನ್ನು ನನ್ನ ಮಗ ವಿರೋಧಿಸಿದಾಗ, ಶೈಲೇಂದ್ರ ನಮಗೆಲ್ಲ ಹೊಡೆದು ನಿಂದಿಸಿದನು’’ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಹೇಳಿಕೊಂಡಿದ್ದಾರೆ.







