ಉತ್ತರ ಪ್ರದೇಶ | ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಇಬ್ಬರು ಮೃತ್ಯು, ಐವರಿಗೆ ಗಾಯ

ಸಾಂದರ್ಭಿಕ ಚಿತ್ರ
ಲಕ್ನೊ, ಆ. 31: ಇಲ್ಲಿನ ಗುಡಂಬಾ ಪ್ರದೇಶದ ಮನೆಯೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಪಟಾಕಿ ಕಾರ್ಖಾನೆಯಲ್ಲಿ ರವಿವಾರ ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ. ಇತರ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಡಂಬಾದ ಬೆಹ್ತಾ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 12 ಗಂಟೆಗೆ ಸಂಭವಿಸಿದ ಈ ಸ್ಫೋಟದಿಂದ ಸಮೀಪದ ಮನೆಗಳಿಗೆ ಕೂಡ ಹಾನಿ ಉಂಟಾಗಿದೆ.
‘‘ಪಟಾಕಿ ಕಾರ್ಖಾನೆ ಕಾರ್ಯ ನಿರ್ವಹಿಸುತ್ತಿದ್ದ ಮನೆಯಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ’’ ಎಂದು ಪೊಲೀಸ್ ಉಪ ಆಯುಕ್ತ (ಎಸಿಪಿ) ಆನಿಂದ್ಯ ವಿಕ್ರಮ್ ಸಿಂಗ್ ಹೇಳಿದ್ದಾರೆ.
ಸ್ಫೋಟದಿಂದ ಛಾವಣಿಯ ಒಂದು ಭಾಗ ಕುಸಿದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸ್ಫೋಟ ಸಂಭವಿಸಿದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಧಾವಿಸಿದ ಜಿಲ್ಲಾಧಿಕಾರಿ ವಿಸಾಕ್ ಜಿ, ‘‘ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಉಳಿದ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’’ ಎಂದು ತಿಳಿಸಿದ್ದಾರೆ.
ಸ್ಫೋಟ ತೀವ್ರವಾಗಿದ್ದುದರಿಂದ ಸಮೀಪದ ಮನೆಗಳಿಗೆ ಕೂಡ ಹಾನಿ ಉಂಟಾಗಿದೆ. ಸ್ಫೋಟ ಸಂಭವಿಸಿದ ಮನೆಯ ಸಮೀಪ ಇದ್ದ ಕನಿಷ್ಠ ನಾಲ್ಕು ಮನೆಗಳಿಗೆ ಹಾನಿಗೀಡಾಗಿದೆ ಎಂದು ಅವರು ಹೇಳಿದ್ದಾರೆ.
ಗಾಯಾಳುಗಳಿಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ಇದನ್ನು ನಮ್ಮ ತಂಡ ಪೂರ್ಣಗೊಳಿಸಿದ ಬಳಿಕ ಘಟನೆಯ ಹಿಂದಿನ ಕಾರಣ ಹಾಗೂ ಅದರಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ







