ಉತ್ತರ ಪ್ರದೇಶ | ಮಾನವರಿಗೆ 2 ಸಲ ಕಚ್ಚುವ ನಾಯಿಗಳಿಗೆ ‘ಜೀವಾವಧಿ’!

ಸಾಂದರ್ಭಿಕ ಚಿತ್ರ
ಲಕ್ನೋ, ಸೆ. 16: ಉತ್ತರಪ್ರದೇಶ ಸರಕಾರವು ಅಭೂತಪೂರ್ವ ಆದೇಶವೊಂದರಲ್ಲಿ, ಒಮ್ಮೆ ಮಾನವರಿಗೆ ಕಚ್ಚುವ ನಾಯಿಗಳನ್ನು 10 ದಿನಗಳ ಕಾಲ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಇಡಬೇಕು ಹಾಗೂ ಆ ನಾಯಿಗಳು ತಮ್ಮ ಅಭ್ಯಾಸವನ್ನು ಮುಂದುವರಿಸಿದರೆ ಅವುಗಳನ್ನು ಜೀವನಪರ್ಯಂತ ಆ ಕೇಂದ್ರದಲ್ಲೇ ಇಡಬೇಕು ಎಂದು ಹೇಳಿದೆ.
ಇಂಥ ಪ್ರಕರಣಗಳಲ್ಲಿ, ಆ ನಾಯಿಗಳಿಗೆ ಇರುವ ಏಕೈಕ ಪರಿಹಾರ ಎಂದರೆ ಯಾರಾದರೂ ಅವುಗಳನ್ನು ದತ್ತು ತೆಗೆದುಕೊಳ್ಳಬೇಕು. ದತ್ತು ತೆಗೆದುಕೊಳ್ಳುವಾಗ, ನಾಯಿಗಳನ್ನು ಯಾವತ್ತೂ ರಸ್ತೆಗಳಿಗೆ ಬಿಡುವುದಿಲ್ಲ ಎಂಬ ಅಫಿದಾವಿತ್ ಸಲ್ಲಿಸಬೇಕು.
ಈ ಆದೇಶವನ್ನು ಉತ್ತರಪ್ರದೇಶ ಸರಕಾರದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಾತ್ ಸೆಪ್ಟಂಬರ್ 10ರಂದು ಎಲ್ಲಾ ಗ್ರಾಮೀಣ ಮತ್ತು ನಗರ ಪೌರ ಸಂಸ್ಥೆಗಳಿಗೆ ಹೊರಡಿಸಲಾಗಿದೆ.
ಬೀದಿ ನಾಯಿ ಕಚ್ಚಿದ ಬಳಿಕ ಯಾರಾದರೂ ರೇಬೀಸ್ ಲಸಿಕೆ ತೆಗೆದುಕೊಂಡರೆ ಆ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು ಮತ್ತು ಸಂಬಂಧಪಟ್ಟ ನಾಯಿಯನ್ನು ಸಮೀಪದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಒಯ್ಯಲಾಗುವುದು ಎಂದು ಆದೇಶ ತಿಳಿಸಿದೆ.





