ಉತ್ತರ ಪ್ರದೇಶದಲ್ಲಿ ʼಪೋಸ್ಟ್ ಮಾರ್ಟಂ ಮಾಫಿಯಾʼ; 50 ಸಾವಿರ ಕೊಟ್ಟರೆ ಕೊಲೆ ಆರೋಪಿಗಳ ಬಿಡುಗಡೆ, ನಿರಪರಾಧಿಗಳು ಕಂಬಿಯ ಒಳಗೆ!

ಸಾಂದರ್ಭಿಕ ಚಿತ್ರ |PC : freepik.com
ಸಂಭಾಲ್: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ʼಪೋಸ್ಟ್ ಮಾರ್ಟಂ ಮಾಫಿಯಾʼ ಜಾಲವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕೊಲೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಹಾಯ ಮಾಡುವುದು, ನಿರಪರಾಧಿಗಳನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸುವುದು, ಮರಣೋತ್ತರ ಪರೀಕ್ಷೆ (ಪೋಸ್ಟ್ಮಾರ್ಟಂ) ವರದಿಗಳನ್ನು ತಿರುಚುವುದು, ಪುರಾವೆಗಳನ್ನು ಅಳಿಸುವುದು ಮುಂತಾದ ಅಕ್ರಮ ಚಟುವಟಿಕೆಗಳನ್ನು ಈ ಜಾಲ ನಡೆಸುತ್ತಿದ್ದುದು ಪತ್ತೆಯಾಗಿದೆ ಎಂದು Times of India ವರದಿ ಮಾಡಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 50,000 ರೂ. ಲಂಚದ ನೀಡಿದರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬದಲಾಯಿಸುತ್ತಿದ್ದರು. ಸಾವಿನ ಗುರುತುಗಳನ್ನು ಮರೆಮಾಚುವುದು, ಸಾವಿನ ಕಾರಣವನ್ನು “ಅನಿರ್ದಿಷ್ಟ” ಎಂದು ಬದಲಿಸುವುದು, ಕೆಲವೊಮ್ಮೆ ಸಂಪೂರ್ಣ ವರದಿಯನ್ನು ನಾಪತ್ತೆ ಮಾಡುವುದೂ ನಡೆಯುತ್ತಿತ್ತು.
ಈ ಜಾಲದಿಂದ ಹಲವು ಪ್ರಕರಣಗಳಲ್ಲಿ ನಿರಪರಾಧಿಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸತ್ಯವೀರ್ ಸಿಂಗ್ ಎಂಬವರ ತಂದೆ ರಾಮ್ವೀರ್ ಸಿಂಗ್ ರನ್ನು ಕೊಲೆ ಮಾಡಲಾಗಿತ್ತು. ಆದರೆ ಅವರ ಮರಣೋತ್ತರ ಪರೀಕ್ಷೆಯ ವರದಿ ನಾಪತ್ತೆಯಾಗಿದ್ದು ಕ್ರಮ ಕೈಗೊಳ್ಳಲು ತೊಡಕಾಯಿತು.
ನೆಕ್ಸಿ ದೇವಿ ಮತ್ತು ಸತ್ವೀರ್ ಕುಮಾರ್ ತಪ್ಪು ವರದಿಯ ಆಧಾರದ ಮೇಲೆ ಎರಡು ವರ್ಷ ಜೈಲಿನಲ್ಲಿ ಕಳೆದರು. ಮಧುರ್ ಆರ್ಯ ಎಂಬ ಫಾರ್ಮಸಿಸ್ಟ್ 19 ವರ್ಷದ ಯುವತಿಯ ಸಾವಿನ ವರದಿ ತಿರುಚಲು 50,000 ಪಡೆದಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಸುಮನ್ ಎಂಬ ಮಹಿಳೆಯ ಸಾವಿನ ಪ್ರಕರಣವನ್ನು ಆತ್ಮಹತ್ಯೆ ಎಂದು ತೋರಿಸಿರುವ ಸುಳ್ಳು ವರದಿಯೂ ಬಹಿರಂಗಗೊಂಡಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 31 ಅಕ್ರಮ ಆರೋಗ್ಯ ಕೇಂದ್ರಗಳನ್ನು ಮುಚ್ಚಲಾಗಿದೆ. ಎಲ್ಲಾ ಶಂಕಾಸ್ಪದ ಮರಣೋತ್ತರ ಪರೀಕ್ಷೆಯ ವರದಿಗಳನ್ನು ರಾಜ್ಯ ವೈದ್ಯಕೀಯ-ಕಾನೂನು ಮಂಡಳಿ ಮರುಪರಿಶೀಲಿಸಲು ಆದೇಶಿಸಿದೆ. ವರದಿಗಳು, ಫೋಟೋಗಳು, ವೀಡಿಯೊಗಳನ್ನು ನೇರವಾಗಿ CCTNS ವ್ಯವಸ್ಥೆಗೆ ಅಪ್ಲೋಡ್ ಮಾಡುವ ಕ್ರಮ ಜಾರಿಯಾಗಿದೆ.
“ಪುರಾವೆಗಳನ್ನು ತಿರುಚುವಿಕೆಗೆ ಅವಕಾಶ ನೀಡುವುದಿಲ್ಲ. ಮತ್ತೊಮ್ಮೆ ಇಂತಹ ಅಕ್ರಮ ಕಂಡುಬಂದರೆ ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಾಗುವುದು", ಎಂದು ಸಂಭಾಲ್ ಎಸ್ಪಿ ಕೃಷ್ಣಕಾಂತ್ ಬಿಷ್ಣೋಯಿ ಹೇಳಿದ್ದಾರೆ.
“31 ಅಕ್ರಮ ಆರೋಗ್ಯ ಕೇಂದ್ರಗಳಿಗೆ ಬೀಗ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು", ಎಂದು ಜಿಲ್ಲಾಧಿಕಾರಿ ರಾಜಿಂದರ್ ಪೆನ್ಸಿಯಾ ಪ್ರತಿಕ್ರಿಯಿಸಿದ್ದಾರೆ.







