ಉತ್ತರ ಪ್ರದೇಶ: ಕಾನೂನು ವಿದ್ಯಾರ್ಥಿಯ ಮೇಲೆ ಫಾರ್ಮಸಿ ಮಾಲೀಕನಿಂದ ಭೀಕರ ಆಕ್ರಮಣ

ಸಾಂದರ್ಭಿಕ ಚಿತ್ರ | Photo Credit : freepik.com
ಕಾನ್ಪುರ, ಅ. 27: ಉತ್ತರಪ್ರದೇಶದ ಕಾನ್ಪುರದಲ್ಲಿ, ಔಷಧಿ ಅಂಗಡಿಯೊಂದರಲ್ಲಿ ಅಧಿಕ ಬೆಲೆ ವಸೂಲಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 22 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರ ಮೇಲೆ ಅಂಗಡಿಯ ಮಾಲೀಕರು ಮಾರಣಾಂತಿಕ ಹಲ್ಲೆ ನಡೆಸಿರುವುದು ವರದಿಯಾಗಿದೆ.
ಮೊದಲ ವರ್ಷದ ಎಲ್ಎಲ್ಬಿ ವಿದ್ಯಾರ್ಥಿ ಅಭಿಜಿತ್ ಸಿಂಗ್ ಚಂದೇಲ್ ರಿಗೆ ದುಷ್ಕರ್ಮಿಗಳು ಮಾಂಸ ಕಡಿಯುವ ಕತ್ತಿಯಿಂದ ದಾಳಿ ನಡೆಸಿದ್ದಾರೆ. ಆಕ್ರಮಣದ ತೀವ್ರತೆಗೆ ವಿದ್ಯಾರ್ಥಿಯ ಹೊಟ್ಟೆ ಸೀಳಿದ್ದು, ಎರಡು ಬೆರಳುಗಳು ತುಂಡಾಗಿವೆ.
ಮನೆಯ ಸಮೀಪದ ಔಷಧಿ ಅಂಗಡಿಯಲ್ಲಿ ಔಷಧಿಯೊಂದರ ಬೆಲೆಯ ಬಗ್ಗೆ ತಗಾದೆ ತೆಗೆದ ಅಭಿಜಿತ್ ಮೇಲೆ ಅಂಗಡಿ ಮಾಲೀಕ ಅಮರ್ ಸಿಂಗ್ ಚೌಹಾಣ್, ಅವನ ಸಹೋದರ ವಿಜಯ್ ಸಿಂಗ್ ಮತ್ತು ಅವರ ಇಬ್ಬರು ಸಂಗಡಿಗರು ಭೀಕರ ಆಕ್ರಮಣ ನಡೆಸಿದರು.
ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಕುಟುಂಬಿಕರು ಮತ್ತು ಸ್ಥಳೀಯರು ನಾಲ್ಕು ಆಸ್ಪತ್ರೆಗಳಿಗೆ ಕರೆದುಕೊಂಡು ಹೋದರು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರು.
ಅಭಿಜೀತ್ ರ ಕರುಳುಗಳು ಹೊರಗೆ ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುನ್ನ ಅವುಗಳನ್ನು ಬಟ್ಟೆಯಿಂದ ಕಟ್ಟಲಾಗಿತ್ತು. ಅಂತಿಮವಾಗಿ ಒಂದು ಆಸ್ಪತ್ರೆಯು ಅಭಿಜೀತ್ ರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಂಡಿತು. ಅವರಿಗೆ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.
ಪೊಲೀಸರು ಅಂಗಡಿಯ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
► ಪ್ರಕರಣ ಮುಚ್ಚಿಹಾಕಲು ಪೊಲೀಸರಿಂದ ಯತ್ನ: ತಾಯಿ ಆರೋಪ
ತನ್ನ ಮಗನ ಮೇಲೆ ನಡೆದ ಭೀಕರ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾನೂನು ವಿದ್ಯಾರ್ಥಿಯ ತಾಯಿ ನೀಲಮ್ ಸಿಂಗ್ ಚಂದೇಲ್ ಆರೋಪಿಸಿದ್ದಾರೆ.
‘‘ಆರೋಪಿಗಳು ಪೊಲೀಸರೊಂದಿಗೆ ಉತ್ತಮ ಸಂಪರ್ಕಗಳನ್ನು ಹೊಂದಿದ್ದಾರೆ. ಹಾಗಾಗಿ, ಅಪರಾಧಿಗಳನ್ನು ಬಂಧಿಸುವ ಬದಲು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಗ ಮತ್ತು ನನ್ನ ವಿರುದ್ಧವೇ ಆರೋಪಿಗಳು ನೀಡಿರುವ ದೂರಿನಂತೆ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ.







