ಉತ್ತರಪ್ರದೇಶ | 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಪ್ರಕರಣ ಮುಚ್ಚಿ ಹಾಕಿದ ಪೊಲೀಸರು!

ಸಾಂದರ್ಭಿಕ ಚಿತ್ರ | Photo Credit : freepik.com
ಲಕ್ನೋ, ನ. 25: ಹನ್ನೊಂದು ವರ್ಷದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಎದುರಿಸುತ್ತಿರುವ ಅಪಾರ್ಟ್ ಮೆಂಟ್ ಕಟ್ಟಡದ ಭದ್ರತಾ ಸಿಬ್ಬಂದಿಯ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಉತ್ತರಪ್ರದೇಶದ ಪೊಕ್ಸೊ ನ್ಯಾಯಾಲಯವೊಂದು ನೊಯ್ಡಾ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪೊಲೀಸರು ಆರೋಪಿ ನೀಡಿದ ಹೇಳಿಕೆಯ ಆಧಾರದಲ್ಲಿ ಬಾಲಕಿಯ ತಾಯಿ ನೀಡಿದ್ದ ದೂರನ್ನು ಮುಚ್ಚಿದ್ದರು.
‘‘ವಿಚಾರಣೆಯ ವೇಳೆ, ಸಂತ್ರಸ್ತ ಬಾಲಕಿಯು ಈ ನ್ಯಾಯಾಲಯಕ್ಕೆ ಹಾಜರಾಗಿ, ಆರೋಪಿಯು ತನ್ನ ದೇಹದ ಮೇಲೆ ನಡೆಸಿದ ದಾಳಿಯನ್ನು ವಿವರಿಸಿದ್ದಾಳೆ’’ ಎಂದು ತನ್ನ ಆದೇಶದಲ್ಲಿ ಪೊಕ್ಸೊ ನ್ಯಾಯಾಧೀಶ ವಿಕಾಸ್ ನಗರ್ ಹೇಳಿದ್ದಾರೆ.
ಪ್ರಧಾನ ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ ನ್ಯಾಯಾಲಯವು, ಇತರ ಆರೋಪಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ಕಂಡುಬಂದರೆ ಅವರ ವಿರುದ್ಧವೂ ತನಿಖಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಲೈಂಗಿಕ ಕಿರುಕುಳದಲ್ಲಿ ಭದ್ರತಾ ಸಿಬ್ಬಂದಿಯಲ್ಲದೆ ಅಪಾರ್ಟ್ಮೆಂಟ್ ಮಾಲೀಕರ ಅಸೋಸಿಯೇಶನ್ನ ಒಬ್ಬ ಸದಸ್ಯನೂ ಭಾಗಿಯಾಗಿದ್ದಾನೆ ಎಂಬುದಾಗಿ ಬಾಲಕಿಯು ತನ್ನ ತಾಯಿಯ ಮೂಲಕ ಆರೋಪಿಸಿದ್ದಾಳೆ. ಆ ಸದಸ್ಯನ ಫೋನ್ನಲ್ಲಿ ‘‘ಬಾಲಕಿಯ ಜೊತೆಗಿನ ಆರೋಪಿ ಭದ್ರತಾ ಸಿಬ್ಬಂದಿಯ ಸೆಲ್ಫಿ’’ ಇತ್ತು ಎನ್ನಲಾಗಿದೆ. ತನ್ನ ಕೃತ್ಯಕ್ಕೆ ಬಾಲಕಿಯ ಸಮ್ಮತಿಯಿದೆ ಎಂದು ತೋರಿಸಲು ಆರೋಪಿಯು ಆ ಚಿತ್ರವನ್ನು ತೆಗೆದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸಿದ್ದರು ಹಾಗೂ ರಾಜಿ ಮಾಡಿಕೊಳ್ಳುವಂತೆ ಬಾಲಕಿಯ ಹೆತ್ತವರ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.
ಎಕ್ಸ್ಪ್ರೆಸ್ ವೇ ಠಾಣೆಯ ಠಾಣಾಧಿಕಾರಿ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಬಳಿಕ ಬಾಲಕಿಯ ಕುಟುಂಬವು ಡಿಸಿಪಿ ಯಮುನಾ ಪ್ರಸಾದ್ ರನ್ನು ಭೇಟಿಯಾಗಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿತು. ಆದರೆ, ಯಾವುದೇ ಕ್ರಮ ಆಗಲಿಲ್ಲ. ಬಳಿಕ ಕುಟುಂಬವು ಮುಖ್ಯಮಂತ್ರಿಯ ದೂರು ವೆಬ್ ಸೈಟ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಅಲ್ಲಿಯೂ ಯಾವುದೇ ಪ್ರಯೋಜನ ಆಗದಾಗ, ತಾಯಿ ಗ್ರೇಟ್ ನೊಯ್ಡಾದಲ್ಲಿರುವ ಪೊಕ್ಸೊ ನ್ಯಾಯಾಲಯಕ್ಕೆ ದೂರು ನೀಡಿದರು.







