Uttar Pradesh | ಅಯೋಧ್ಯೆಯ ಬಳಿಕ ಕಾಶಿ, ಮಥುರಾ: ಸಿಎಂ ಆದಿತ್ಯನಾಥ್

ಆದಿತ್ಯನಾಥ್ | Photo Credit : PTI
ಹೊಸದಿಲ್ಲಿ, ಡಿ. 6: ಅಯೋಧ್ಯೆಯ ಬಳಿಕ, ನಾವು ಕಾಶಿ ಮತ್ತು ಮಥುರಾಕ್ಕೆ ಹೋಗುತ್ತೇವೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.
‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ‘ನಾಯಕತ್ವ ಸಮ್ಮೇಳನ 2025’ರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯ ಬಳಿಕ, ಸರಕಾರವು ಕಾಶಿ, ಮಥುರಾದ ಮೇಲೆ ಕಣ್ಣಿಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ‘‘ನಾವು ಎಲ್ಲಾ ಕಡೆಗೂ ಹೋಗುತ್ತೇವೆ’’ ಎಂದು ಹೇಳಿದರು.
‘ಅಯೋಧ್ಯಾ ತೊ ಬಸ್ ಝಾನ್ಕಿ ಹೈ.. ಕಾಶಿ-ಮಥುರಾ ಅಭೀ ಬಾಕಿ ಹೈ’ ಎಂಬ ಘೋಷಣೆಯ ಹಿನ್ನೆಲೆಯಲ್ಲಿ, ಜ್ಞಾನವಾಪಿ ಮತ್ತು ಶಾಹಿ ಈದ್ಗಾ ಮಸೀದಿ ಆವರಣಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಾವು ಎಲ್ಲಾ ಸ್ಥಳಗಳಿಗೂ ಹೋಗುತ್ತೇವೆ, ನಾವು ಈಗಾಗಲೇ ಹೋಗಿದ್ದೇವೆ’’ ಎಂದು ಹೇಳಿದರು.
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಸುದೀರ್ಘ ಎಂಟು ವರ್ಷಗಳ ಕಾಲ ನಡೆಸಿರುವ ಆಳ್ವಿಕೆಯ ಬಗ್ಗೆ ಮಾತನಾಡಿದ ಮಾತನಾಡಿದ ಆದಿತ್ಯನಾಥ್, ‘‘ಉತ್ತರಪ್ರದೇಶವು ದೇಶದ ಅತ್ಯಂತ ದೊಡ್ಡ ರಾಜ್ಯವಾಗಿದೆ. ಅಲ್ಲಿ ಎಂಟು ವರ್ಷಗಳಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡಲು ನನ್ನ ಪಕ್ಷ ನನಗೆ ಅವಕಾಶ ನೀಡಿದೆ. ಈ ಎಂಟು ವರ್ಷಗಳ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ ತುಂಬಾ ಬದಲಾವಣೆಯಾಗಿದೆ’’ ಎಂದು ಹೇಳಿದರು.





