ಉತ್ತರ ಪ್ರದೇಶ | ಹಣಕ್ಕಾಗಿ ತಂದೆ-ತಾಯಿಯನ್ನು ಹತ್ಯೆಗೈದು ಮೃತದೇಹಗಳನ್ನು ನದಿಗೆ ಎಸೆದ ಯುವಕ

ಸಾಂದರ್ಭಿಕ ಚಿತ್ರ
ವಾರಾಣಸಿ: ಹಣಕ್ಕಾಗಿ ತನ್ನ ಪೋಷಕರನ್ನೇ ಕೊಂದ ಆರೋಪದ ಮೇಲೆ 30 ವರ್ಷದ ಯುವಕನೊಬ್ಬನನ್ನು ಸೋಮವಾರ ಸಂಜೆ ಜೌನ್ ಪುರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಅಂಬೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಡಿಸೆಂಬರ್ 8ರಿಂದ ತನ್ನ ತಂದೆ ಶ್ಯಾಮ್ ಬಹದ್ದೂರ್ ಹಾಗೂ ತಾಯಿ ಬಬಿತಾ ದೇವಿ ನಾಪತ್ತೆಯಾಗಿದ್ದಾರೆ ಎಂದು ಜಫ್ರದಾಬಾದ್ ನಿವಾಸಿಯಾದ ವಂದನಾ ದೇವಿ ದೂರು ಸಲ್ಲಿಸಿದ್ದರು ಎಂದು ಜೌನ್ ಪುರ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ಹೇಳಿದ್ದಾರೆ.
ಡಿಸೆಂಬರ್ 12ರಂದು ಮತ್ತೊಂದು ದೂರು ದಾಖಲಿಸಿದ್ದ ಆಕೆ, ತನ್ನ ಸಹೋದರ ಕೂಡಾ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಎರಡೂ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದ ಜೌನ್ ಪುರ್ ಠಾಣೆ ಪೊಲೀಸರು, ನಾಪತ್ತೆಯಾಗಿದ್ದ ಮೂವರ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ್ದರು. ಸೋಮವಾರ ಸಂಜೆ ಜೌನ್ ಪುರ್ ನಗರದಲ್ಲಿ ಅಂಬೇಶ್ ಕುಮಾರ್ ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ, ಡಿಸೆಂಬರ್ 8ರಂದು ದುಡ್ಡಿಗಾಗಿ ನಡೆದ ಜಗಳದ ಸಂದರ್ಭದಲ್ಲಿ ನಾನು ರುಬ್ಬುವ ಗುಂಡಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದರಿಂದ, ಅವರಿಬ್ಬರೂ ಮೃತಪಟ್ಟರು ಎಂದು ಅಂಬೇಶ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.
ಅವರಿಬ್ಬರ ಮೃತದೇಹಗಳನ್ನು ಗೋಣಿ ಚೀಲದಲ್ಲಿ ತುಂಬಿದ್ದ ಆತ, ಗೋಮತಿ ನದಿಗೆ ಅವನ್ನು ಎಸೆದಿದ್ದ ಎನ್ನಲಾಗಿದೆ.
ಆರೋಪಿ ಅಂಬೇಶ್ ಕುಮಾರ್ ನೀಡಿದ ಹೇಳಿಕೆಯ ಆಧಾರದಲ್ಲಿ ನದಿಗೆ ಎಸೆಯಲಾಗಿರುವ ಮೃತದೇಹಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳು ಮುಂದುವರಿದಿವೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಶ್ರೀವಾಸ್ತವ ತಿಳಿಸಿದ್ದಾರೆ.







