ಉತ್ತರ ಪ್ರದೇಶ| ಮತಾಂತರ ಆರೋಪಿಸಿ ಬಜರಂಗದಳದಿಂದ ಪ್ರತಿಭಟನೆ: 60 ವರ್ಷದ ಪಾಸ್ಟರ್, ಪುತ್ರನ ಬಂಧನ

ಸಾಂದರ್ಭಿಕ ಚಿತ್ರ | Photo Credit : freepik
ಲಕ್ನೋ, ಡಿ. 29: ಹಿಂದೂ ಮಹಿಳೆಯರಿಗೆ ಹಣ ಹಾಗೂ ಇತರ ಭರವಸೆಗಳ ಆಮಿಷ ಒಡ್ಡಿ ಬಲವಂತದ ಮತಾಂತರ ಮಾಡಿದ್ದಾರೆ ಆರೋಪಿಸಿ ಬಜರಂಗದಳದ ಸದಸ್ಯರು ಫತೇಹ್ಪುರ ಜಿಲ್ಲೆಯ ಚರ್ಚೊಂದರ ಹೊರಗೆ ಪ್ರತಿಭಟನೆ ನಡೆಸಿದ ಬಳಿಕ ಫಾಸ್ಟರ್ ಹಾಗೂ ಅವರ ಪುತ್ರನನ್ನು ಉತ್ತರಪ್ರದೇಶ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಪಾಸ್ಟರ್ ಡೇವಿಡ್ ಗ್ಲಾಡಿಯರ್ (60) ಹಾಗೂ ಅವರ ಪುತ್ರ ಅಭಿಷೇಕ್ ಗ್ಲಾಡ್ಸನ್ (30)ನನ್ನು ಪೊಲೀಸರು ಕರೆದೊಯ್ಯುತ್ತಿರುವಾಗ ಪ್ರತಿಭಟಕಾರರು ವಾಹನಕ್ಕೆ ಅಲ್ಪ ಕಾಲ ಮುತ್ತಿಗೆ ಹಾಕಿದರು.
ಚರ್ಚ್ನ ಒಳಗೆ ಪ್ರಾರ್ಥನೆ ನಡೆಯುತ್ತಿರುವಾಗ ಬಜರಂಗದಳದ ಕಾರ್ಯಕರ್ತರು ಹೊರಗೆ ಸೇರಿದರು. ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಪಾಸ್ಟರ್ ಹಾಗೂ ಅವರ ಪುತ್ರ ಹಿಂದೂ ಮಹಿಳೆಯರಿಗೆ ಹಣ, ಉದ್ಯೋಗ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆಯ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದರು.
ಚರ್ಚ್ನ ಒಳಗೆ ದೊಡ್ಡ ಸಂಖ್ಯೆಯ ಮಹಿಳೆಯರು ಸೇರಿದಂತೆ ಸುಮಾರು 150 ಜನರು ಇದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಪ್ರತಿಭಟನೆಯ ಮಾಹಿತಿ ತಿಳಿದ ಸರ್ಕಲ್ ಆಫೀಸರ್ ವೀರ್ ಸಿಂಗ್ ದೊಡ್ಡ ಪೊಲೀಸ್ ತುಕಡಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಅಲ್ಲದೆ, ಪಾಸ್ಟರ್ ಹಾಗೂ ಅವರ ಪುತ್ರನನ್ನು ವಶಕ್ಕೆ ತೆಗೆದುಕೊಂಡರು.
ಸ್ಥಳೀಯ ನಿವಾಸಿ ದೇವ ಪ್ರಕಾಶ್ ಪಾಸ್ವಾನ್ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಪಾಸ್ಟರ್, ಅವರ ಪುತ್ರ ಹಾಗೂ 7 ಮಂದಿ ಅಪರಿಚಿತರ ವಿರುದ್ಧ ಉತ್ತರಪ್ರದೇಶ ಕಾನೂನು ಬಾಹಿರ ಮತಾಂತರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಧಾನಗರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ.







