Uttar Pradesh| ʼಉಂಡ ಮನೆಗೆ ಕನ್ನʼ: ನಿವೃತ್ತ ರೈಲ್ವೆ ಉದ್ಯೋಗಿ, ಪುತ್ರಿಯನ್ನು 5 ವರ್ಷದಿಂದ ಕೂಡಿ ಹಾಕಿದ್ದ ಮನೆಕೆಲಸದ ದಂಪತಿ

Photo Credit : NDTV
ಲಕ್ನೋ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಅನ್ನ, ಆಹಾರ ಸಿಗದೆ ಹಸಿವಿನಿಂದ ಮೃತಪಟ್ಟಿದ್ದಾರೆ. ಅವರ ಮಾನಸಿಕ ಅಸ್ವಸ್ಥ ಪುತ್ರಿ ಅಸ್ಥಿಪಂಜರದ ಸ್ಥಿತಿಯಲ್ಲಿ ಗಂಭೀರವಾಗಿದ್ದಾರೆ. ಸರಕಾರಿ ನೌಕರನ ಈ ದಯಾನೀಯ ಸಾವಿಗೆ ಅವರ ಮನೆಕೆಲಸಗಾರರಾಗಿದ್ದ ದಂಪತಿ ಕಾರಣವಾಗಿದ್ದು, ಈ ಭಯಾನಕ ಕ್ರೌರ್ಯದ ಪ್ರಕರಣ ದೇಶದಲ್ಲಿ ಭಾರೀ ಸುದ್ದಿಯಾಗಿದೆ.
ನಿವೃತ್ತ ರೈಲ್ವೆ ಉದ್ಯೋಗಿ ಓಂ ಪ್ರಕಾಶ್ ಸಿಂಗ್ ರಾಥೋಡ್ (70) ಸೋಮವಾರ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ನೋಡಲು ಕುಟುಂಬಸ್ಥರು ತೆರಳಿದಾಗ ಓಂ ಪ್ರಕಾಶ್ ಸಿಂಗ್ ಮತ್ತು ಅವರ ಪುತ್ರಿ ರಶ್ಮಿಯನ್ನು ಸ್ವಂತ ಮನೆಯೊಳಗೆ ಐದು ವರ್ಷಗಳ ಕಾಲ ಕೂಡಿಹಾಕಿರುವುದು ಬಹಿರಂಗವಾಗಿದೆ. ಆಸ್ತಿಯ ದುರಾಸೆಯಿಂದ ಮನೆಕೆಲಸದ ದಂಪತಿ ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಓಂ ಪ್ರಕಾಶ್ ಸಹೋದರ ಅಮರ್ ಸಿಂಗ್ ರಾಥೋಡ್, ನನ್ನ ಸಹೋದರ ಓಂ ಪ್ರಕಾಶ್ 2015ರಲ್ಲಿ ನಿವೃತ್ತನಾಗಿದ್ದ. 2016ರಲ್ಲಿ ಪತ್ನಿಯ ಮರಣದ ನಂತರ ರಶ್ಮಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದ. ಓಂ ಪ್ರಕಾಶ್ ಗೆ ಅಡುಗೆ ಮಾಡಲು ಗೊತ್ತಿರಲಿಲ್ಲ. ಇದೇ ಕಾರಣಕ್ಕೆ ರಾಮ್ ಪ್ರಕಾಶ್ ಕುಶ್ವಾಹ ಮತ್ತು ಪತ್ನಿ ರಾಮ್ ದೇವಿಯನ್ನು ಮನೆಕೆಲಸಕ್ಕೆ ನೇಮಿಸಿಕೊಂಡಿದ್ದ. ರಾಮ್ ದೇವಿಗೆ ರಶ್ಮಿಯನ್ನು ನೋಡಿಕೊಳ್ಳುವಂತೆ ಕೂಡ ಹೇಳಲಾಗಿತ್ತು. ಆದರೆ ಮನೆ ಕೆಲಸಕ್ಕೆ ಬಂದ ದಂಪತಿ ನನ್ನ ಸಹೋದರನ ಮನೆಯನ್ನು ವಶಪಡಿಸಿಕೊಂಡರು. ನನ್ನ ಸಹೋದರ ಮತ್ತು ಆತನ ಮಗಳನ್ನು ನೆಲ ಮಹಡಿಯಲ್ಲಿರುವ ಕೋಣೆಗೆ ಸೀಮಿತಗೊಳಿಸಿ ತಾವು ಮೇಲಿನ ಮಹಡಿಯಲ್ಲಿ ಆರಾಮವಾಗಿ ವಾಸಿಸುತ್ತಿದ್ದರು. ನನ್ನ ಸಹೋದರನ ಆರೋಗ್ಯ ಹದಗೆಟ್ಟರೂ ಅವರು ಆಸ್ಪತ್ರೆಗೆ ದಾಖಲಿಸಿಲ್ಲ. ಒಮ್ಮೆ ಮಾತ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
“ಓಂ ಪ್ರಕಾಶ್ ಮತ್ತು ರಶ್ಮಿಗೆ ಸರಿಯಾದ ಆಹಾರ ನೀಡುತ್ತಿರಲಿಲ್ಲ. ಅವರನ್ನು ಆರೈಕೆ ಮಾಡುತ್ತಿರಲಿಲ್ಲ. ಕುಟುಂಬದ ಸದಸ್ಯರು ಅವರನ್ನು ಭೇಟಿ ನೀಡಲು ಬಂದಾಗಲೆಲ್ಲಾ ಅವರಿಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲವಂತೆ ಎಂದು ನೆಪ ಹೇಳಿ ಕಳುಹಿಸುತ್ತಿದ್ದರು. ದಿನಕ್ಕೆ ಎರಡು ಬಾರಿ ಚಪಾತಿ ಕೊಡುತ್ತಿದ್ದೆವು ಎಂದು ದಂಪತಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಅವರಿಗೆ ಒಂದು ಚಪಾತಿ ನೀಡಿದ್ದರೆ, ಅವರ ಸ್ಥಿತಿ ಹೀಗಿರುತ್ತಿರಲಿಲ್ಲ. ಸೋಮವಾರ ನನ್ನ ಸಹೋದರನ ಸಾವಿನ ಬಗ್ಗೆ ತಿಳಿಸಲಾಯಿತು. ಮನೆಗೆ ಬಂದು ನೋಡಿದಾಗ ಕಂಡ ದೃಶ್ಯವು ನಮಗೆ ಆಘಾತವನ್ನುಂಟು ಮಾಡಿದೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.
“ಓಂ ಪ್ರಕಾಶ್ ಅವರ ಮೃತದೇಹ ತೀವ್ರವಾಗಿ ಕೃಶವಾಗಿದ್ದರೆ, ರಶ್ಮಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ ಮತ್ತು ಅಸ್ಥಿಪಂಜರದ ಸ್ಥಿತಿಯಲ್ಲಿ ಕಂಡುಬಂದರು. ರಶ್ಮಿ ಹಸಿವಿನಿಂದ 80 ವರ್ಷದ ವೃದ್ಧೆಯಂತೆ ಕಾಣುತ್ತಿದ್ದಳು. ದೇಹದ ಮೇಲೆ ಮಾಂಸಗಳೇ ಇರಲಿಲ್ಲ, ಇನ್ನೂ ಉಸಿರಾಡುತ್ತಿದ್ದ ಅಸ್ಥಿಪಂಜರ ಮಾತ್ರ ಇತ್ತು” ಎಂದು ಕುಟುಂಬದ ಮತ್ತೊಬ್ಬ ಸದಸ್ಯರು ಹೇಳಿದರು. ಆಸ್ತಿಗಾಗಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.







