Uttar Pradesh | ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಕೊಲೆಗೈದ ಯುವತಿಯ ಬಂಧನ

ಸಾಂದರ್ಭಿಕ ಚಿತ್ರ
ಬಂಡಾ, ಜ. 2: ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದನೆನ್ನಲಾದ ಮಧ್ಯವಯಸ್ಕನೊಬ್ಬನನ್ನು 18 ವರ್ಷದ ಯುವತಿಯೊಬ್ಬಳು ಹರಿತವಾದ ಆಯುಧದಿಂದ ಕಡಿದು ಹತ್ಯೆಗೈದ ಘಟನೆ ಉತ್ತರಪ್ರದೇಶದ ಬಂಡಾ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿಚಾರಣೆ ನಡೆಯುತ್ತಿದೆ.
ಉತ್ತರಪ್ರದೇಶದ ಮುರ್ವಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 3.30ರ ವೇಳೆಗೆ ಸ್ಥಳೀಯ ನಿವಾಸಿ ಸುಖರಾಜ್ ಪ್ರಜಾಪತಿ (50) ಅವರ ಮೃತದೇಹ ಆತನ ಮನೆಯಲ್ಲಿ ಪತ್ತೆಯಾಗಿದೆ. ಮೃತನ ತಲೆಗೆ ಹರಿತವಾದ ಆಯುಧದಿಂದ ಕಡಿದ ಗಾಯದ ಗುರುತುಗಳು ಕಂಡುಬಂದಿವೆ.
ಮೃತನ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಆಯುಧವನ್ನು ಆಕೆಯಿಂದ ವಶಪಡಿಸಿಕೊಂಡಿದ್ದಾರೆ.
ಹತ್ಯೆಯಾದ ವ್ಯಕ್ತಿ ಸುಖರಾಜ್ ಪ್ರಜಾಪತಿ ತನ್ನ ಮನೆಗೆ ಪ್ರವೇಶಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದನೆಂದು ಬಂಧಿತ ಯುವತಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಆತ್ಮರಕ್ಷಣೆಯ ಪ್ರಯತ್ನವಾಗಿ ತನ್ನ ಮನೆಯಲ್ಲಿದ್ದ ‘ಫರ್ಸಾ’ ಎಂಬ ಹರಿತವಾದ ಆಯುಧದಿಂದ ಆತನನ್ನು ಕಡಿದು ಹತ್ಯೆಗೈದಿರುವುದಾಗಿ ಬಂಧಿತ ಯುವತಿ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ರಾಜೇಂದ್ರ ಸಿಂಗ್ ರಜಾವತ್ ತಿಳಿಸಿದ್ದಾರೆ.







