Uttar Pradesh | ಪ್ರೇಮಿಗಳ ಥಳಿಸಿ ಹತ್ಯೆ

ಸಾಂದರ್ಭಿಕ ಚಿತ್ರ
ಎಟಾ, ಜ. 12: ಇಪ್ಪತ್ತು ವರ್ಷದ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಆಕೆಯ ಕುಟುಂಬವೇ ಥಳಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಎಟಾ ಜಿಲ್ಲೆಯಲ್ಲಿ ರವಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರನ್ನು ಶಿವಾನಿ (20) ಹಾಗೂ ಆಕೆಯ ಪ್ರಿಯಕರ ದೀಪಕ್ (25) ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು.
ಈ ಘಟನೆ ಗರಹಿಯಾ ಸುಹಾಗಪುರ ಗ್ರಾಮದಲ್ಲಿ ನಡೆದಿದೆ. ದೀಪಕ್ ರಾತ್ರಿ ಸುಮಾರು 8.30ಕ್ಕೆ ಆಕೆಯ ಮನೆಗೆ ತೆರಳಿ ಭೇಟಿಯಾಗಿದ್ದ. ಈ ಸಂದರ್ಭ ದೀಪಕ್ ಹಾಗೂ ಶಿವಾನಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದುದನ್ನು ಆಕೆಯ ಕುಟುಂಬದ ಸದಸ್ಯರು ನೋಡಿದ್ದಾರೆ. ಆಕ್ರೋಶಗೊಂಡ ಅವರು ಇಬ್ಬರಿಗೂ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಶಿವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ದೀಪಕ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಯುವತಿಯ ಕುಟುಂಬದ ಕೆಲವು ಸದಸ್ಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್ಎಸ್ಪಿ ಶ್ಯಾಮ್ ನಾರಾಯಣ ಸಿಂಗ್ ತಿಳಿಸಿದ್ದಾರೆ.





