Uttar Pradesh | ‘40 ದಿನಗಳಲ್ಲಿ ಗೋಮಾಂಸ ರಫ್ತು ನಿಷೇಧಿಸಬೇಕು’: ಸಿಎಂ ಆದಿತ್ಯನಾಥ್ಗೆ ಸ್ವಾಮಿ ಅವಿಮುಕ್ತೇಶ್ವರಾನಂದ್ ಸವಾಲು

ಸ್ವಾಮಿ ಅವಿಮುಕ್ತೇಶ್ವರಾನಂದ್ , ಸಿಎಂ ಆದಿತ್ಯನಾಥ್ | Photo Credit: PTI
ಲಕ್ನೋ: ಉತ್ತರ ಪ್ರದೇಶದಲ್ಲಿ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿರುವ ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ 40 ದಿನಗಳ ಗಡುವು ನೀಡಿದ್ದಾರೆ. ನಿಷೇಧ ಜಾರಿಯಾಗದಿದ್ದರೆ ಆದಿತ್ಯನಾಥ್ ಅವರನ್ನು ‘ನಕಲಿ ಹಿಂದೂ’ ಎಂದು ಘೋಷಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ ಎಂದು deccanherald.com ವರದಿ ಮಾಡಿದೆ.
ವಾರಾಣಸಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವಿಮುಕ್ತೇಶ್ವರಾನಂದ್, “ಕೇಸರಿ ಬಟ್ಟೆ ಧರಿಸಿ ಭಾಷಣ ಮಾಡುವುದರಿಂದ ಮಾತ್ರ ಹಿಂದೂ ಆಗುವುದಿಲ್ಲ. ಹಿಂದೂ ಧರ್ಮದ ಮೊದಲ ಹೆಜ್ಜೆ ಗೋಸೇವೆ ಮತ್ತು ಧರ್ಮರಕ್ಷಣೆ” ಎಂದು ಹೇಳಿದರು.
“ಭಾರತದ ಒಟ್ಟು ಗೋಮಾಂಸ ರಫ್ತಿನಲ್ಲಿ ಉತ್ತರ ಪ್ರದೇಶದ ಪಾಲು ಶೇ. 40ರಷ್ಟಿದೆ. ಗೋಮಾಂಸ ರಫ್ತಿನಿಂದ ಗಳಿಸುವ ವಿದೇಶಿ ವಿನಿಮಯದಿಂದ ರಾಮರಾಜ್ಯ ಸ್ಥಾಪನೆಯ ಕನಸು ಈಡೇರಲಿದೆಯೇ? ಉತ್ತರ ಪ್ರದೇಶದಲ್ಲಿ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಹಾಗೂ ಗೋವನ್ನು ‘ರಾಜ್ಯಮಾತೆ’ ಎಂದು ಘೋಷಿಸಬೇಕು” ಎಂದು ಅವರು ಆಗ್ರಹಿಸಿದರು.
ರಫ್ತು ಮಾಡಲಾಗುತ್ತಿರುವ ಮಾಂಸವನ್ನು ‘ಎಮ್ಮೆ ಮಾಂಸ’ ಎಂದು ವರ್ಗೀಕರಿಸಲಾಗುತ್ತಿದೆ. ಆದರೆ ಅದರಲ್ಲಿ ಗೋಮಾಂಸವೂ ಸೇರಿದೆ ಎಂದು ಅವರು ಆರೋಪಿಸಿದರು. ಉತ್ತರ ಪ್ರದೇಶ ಸರ್ಕಾರ 40 ದಿನಗಳೊಳಗೆ ಈ ಕುರಿತು ಸ್ಪಷ್ಟ ಆದೇಶ ಹೊರಡಿಸದಿದ್ದರೆ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ‘ನಕಲಿ ಹಿಂದೂ’ ಎಂದು ಪರಿಗಣಿಸಬೇಕಾಗುತ್ತದೆ. ಈ ವಿಷಯದ ಕುರಿತು ಚರ್ಚಿಸಲು ಮಾರ್ಚ್ನಲ್ಲಿ ಲಕ್ನೋದಲ್ಲಿ ಸಂತರು ಹಾಗೂ ಸ್ವಾಮೀಜಿಗಳ ಸಭೆ ನಡೆಸಲಾಗುವುದು. ಇಂದಿನ ಹೋರಾಟವು ‘ನಿಜವಾದ’ ಮತ್ತು ‘ನಕಲಿ’ ಹಿಂದೂಗಳ ನಡುವಿನ ಹೋರಾಟವಾಗಿದೆ. ಮೊಘಲ್ ಕಾಲದಲ್ಲಿ ನಡೆದದ್ದು ಇಂದು ಮರುಕಳಿಸುತ್ತಿದೆ. ಸನಾತನ ವಿರೋಧಿಗಳಿಗೆ ಅಧಿಕಾರದಲ್ಲಿರುವ ಹಕ್ಕಿಲ್ಲ, ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ್ ಹೇಳಿದರು.
ಈ ಹಿಂದೆ ಸಿಎಂ ಆದಿತ್ಯನಾಥ್ ಅವರು ಸ್ವಾಮಿ ಅವಿಮುಕ್ತೇಶ್ವರಾನಂದರನ್ನು ಪರೋಕ್ಷವಾಗಿ ‘ಕಲ್ನೇಮಿ’ (ರಾವಣನ ಸಂಬಂಧಿ ರಾಕ್ಷಸ) ಎಂದು ಟೀಕಿಸಿದ್ದರು. ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್ನ ಸಂಗಮಕ್ಕೆ ಪವಿತ್ರ ಸ್ನಾನಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ್ ಅವರು ‘ಮಾಘ ಮೇಳ’ದಿಂದ ಹೊರನಡೆದಿದ್ದರು. ಈ ವೇಳೆ ತಮ್ಮ ಶಿಷ್ಯರೊಂದಿಗೆ ಅಧಿಕಾರಿಗಳು ದುರ್ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಿ ಅವರು ಧರಣಿ ನಡೆಸಿದ್ದರು.
ಆದರೆ ಅಧಿಕಾರಿಗಳು ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಮೌನಿ ಅಮಾವಾಸ್ಯೆಯಂದು ಸಂಗಮ ಪ್ರದೇಶ ಭಕ್ತರಿಂದ ತುಂಬಿ ತುಳುಕುತ್ತಿದ್ದ ಕಾರಣ ಅವರ ರಥಕ್ಕೆ ಪ್ರವೇಶಕ್ಕೆ ಅವಕಾಶ ನೀಡಲಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







