Uttar Pradesh | ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ದೂರು ನೀಡಿದ್ದ ವ್ಯಕ್ತಿ ಮೇಲೆ ಹಲ್ಲೆ

ಸ್ವಾಮಿ ಅವಿಮುಕ್ತೇಶ್ವರಾನಂದ |Photo Credit : PTI
ಪ್ರಯಾಗ್ರಾಜ್, ಮಾ. 8: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ತನ್ನ ಆಶ್ರಮದಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿ ದೂರು ನೀಡಿರುವ ಆಶುತೋಷ್ ಬ್ರಹ್ಮಾಚಾರಿಯ ಮೇಲೆ ರವಿವಾರ ಬೆಳಗ್ಗೆ ಪ್ರಯಾಗ್ರಾಜ್ನಲ್ಲಿ ರೈಲೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬ್ಲೇಡ್ನಿಂದ ಹಲ್ಲೆ ಮಾಡಿದ್ದಾನೆ.
ತಾನು ರೇವಾ ಎಕ್ಸ್ಪ್ರೆಸ್ನಲ್ಲಿ ಪ್ರಯಾಗ್ರಾಜ್ಗೆ ಹೋಗುತ್ತಿದ್ದಾಗ ಆಕ್ರಮಣ ನಡೆದಿದೆ ಎಂದು ಆಶುತೋಷ್ ಆರೋಪಿಸಿರುವುದಾಗಿ ಸರಕಾರಿ ರೈಲ್ವೇ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ರವಿವಾರ ಬೆಳಗ್ಗೆ ರೈಲು ಸಿರತು ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ, ಆಶುತೋಷ್ ಶೌಚಾಲಯಕ್ಕೆ ಹೋದರು, ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅವರ ಮೇಲೆ ರೇಝರ್ ಬ್ಲೇಡ್ನಿಂದ ದಾಳಿ ನಡೆಸಿದನು ಎಂದು ಅವರು ಹೇಳಿದರು. ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಳೆದ ವರ್ಷ ಮಾಘ ಮೇಳದ ಸಂದರ್ಭದಲ್ಲಿ, ಓರ್ವ ಅಪ್ತಾಪ್ತ ಸೇರಿದಂತೆ ಇಬ್ಬರು ವ್ಯಕ್ತಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಫೆಬ್ರವರಿ 21ರಂದು ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಾಚಾರಿ ವಿರುದ್ಧ ಮೊಕದ್ದಮೆ ದಾಖಲಾಗಿದೆ.







