ಉತ್ತರ ಪ್ರದೇಶ: ಅಖಿಲೇಶ್ ಅವಧಿಗಿಂತ ಆದಿತ್ಯನಾಥ್ ಆಡಳಿತದಲ್ಲಿ 4 ಪಟ್ಟು ಅಧಿಕ ಶಂಕಿತ ಕ್ರಿಮಿನಲ್ ಗಳ ಹತ್ಯೆ

ಅಖಿಲೇಶ್ ಯಾದವ್ , ಆದಿತ್ಯನಾಥ್ | Photo : PTI
ಲಕ್ನೊ: ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರ ಅವಧಿಗಿಂತ ಆದಿತ್ಯನಾಥ್ ಆಡಳಿತದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ನಾಲ್ಕು ಪಟ್ಟು ಅಧಿಕ ಶಂಕಿತ ಕ್ರಿಮಿನಲ್ ಗಳು ಹತ್ಯೆಯಾಗಿದ್ದಾರೆ.
ಉತ್ತರಪ್ರದೇಶ ವಿಧಾನ ಸಭೆಯಲ್ಲಿ ಆಗಸ್ಟ್ 8ರಂದು ಪ್ರಕಟಿಸಿದ ದತ್ತಾಂಶ ಅಖಿಲೇಶ್ ಯಾದವ್ ಅವರ 2012ರಿಂದ 2017ರ ವರೆಗಿನ ಅವಧಿಗಿಂತ ಆದಿತ್ಯನಾಥ್ ಅವರ 2017ರಿಂದ 2022ರ ವರೆಗಿನ ಆಡಳಿತದಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ನಾಲ್ಕು ಪಟ್ಟು ಅಧಿಕ ಕ್ರಿಮಿನಲ್ ಗಳು ಹತ್ಯೆಯಾಗಿದ್ದಾರೆ ಎಂದು ಬಹಿರಂಗಪಡಿಸಿದೆ.
ಎರಡೂ ಅವಧಿಯಲ್ಲಿ ಬಹುಮತದ ಸರಕಾರ ಇದ್ದು, ಕಾನೂನು ಹಾಗೂ ಸುವ್ಯವಸ್ಥೆ ನೇರವಾಗಿ ಮುಖ್ಯಮಂತ್ರಿ ನಿಯಂತ್ರಣದಲ್ಲಿ ಇತ್ತು. ಪೊಲೀಸ್ ಕಾರ್ಯಾಚರಣೆಯಲ್ಲಿ 2017-18ರಿಂದ 2021-22ರ ವರೆಗಿನ ಅವಧಿಯಲ್ಲಿ 162 ಶಂಕಿತ ಕ್ರಿಮಿನಲ್ಗಳು ಹತ್ಯೆಯಾಗಿದ್ದರೆ, 2012ರಿಂದ 2017ರ ವರೆಗಿನ ಅವಧಿಯಲ್ಲಿ 41 ಶಂಕಿತ ಕ್ರಿಮಿನಲ್ಗಳು ಹತ್ಯೆಯಾಗಿದ್ದಾರೆ.
ಉತ್ತರಪ್ರದೇಶ ವಿಧಾನ ಸಭೆಯಲ್ಲಿ ಸಮಾಜವಾದಿ ಪಕ್ಷದ ಶಾಸಕನ ಪ್ರಶ್ನೆಗೆ ಆದಿತ್ಯನಾಥ್ ಲಿಖಿತ ರೂಪದಲ್ಲಿ ಈ ಮಾಹಿತಿ ನೀಡಿದ್ದಾರೆ. ರಾಜ್ಯದ ಗೃಹ ಖಾತೆ ಆದಿತ್ಯನಾಥ್ ಅವರ ಕೈಯಲ್ಲಿ ಇತ್ತು. ಆದುದರಿಂದ ಇಷ್ಟೊಂದು ಸಂಖ್ಯೆಯ ಶಂಕಿತ ಕ್ರಿಮಿನಲ್ಗಳ ಹತ್ಯೆಗೆ ಆದಿತ್ಯನಾಥ್ ಅವರೇ ನೇರ ಹೊಣೆ ಎಂದು ಹೇಳಲಾಗುತ್ತಿದೆ.







