ಉತ್ತರ ಪ್ರದೇಶ | ಟ್ರ್ಯಾಕ್ಟರ್-ಟ್ರೋಲಿಗೆ ಟ್ರಕ್ ಢಿಕ್ಕಿ 9 ಯಾತ್ರಿಗಳು ಸಾವು, 42 ಮಂದಿಗೆ ಗಾಯ

ಬುಲಂದ್ಶಹರ್ (ಉತ್ತರಪ್ರದೇಶ), ಆ. 25: ಉತ್ತರಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಟ್ರಕ್ ಒಂದು ಯಾತ್ರಿಗಳನ್ನು ಕರೆದೊಯ್ಯುತಿದ್ದ ಟ್ರ್ಯಾಕ್ಟರ್-ಟ್ರಾಲಿಗೆ ಢಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಹಾಗೂ 42 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಯಾತ್ರಿಗಳು ಸಾವನ್ನಪ್ಪಿರುವ ಕುರಿತಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಈ ಅಪಘಾತ ಅರ್ನಿಯಾ ಬೈಪಾಸ್ ನ ಬುಲಂದ್ಶಹರ್-ಅಲಿಗಢ ಗಡಿಯ ಸಮೀಪ ಮುಂಜಾನೆ ಸುಮಾರು 2.10ಕ್ಕೆ ಸಂಭವಿಸಿದೆ. ಟ್ರ್ಯಾಕ್ಟರ್-ಟ್ರೋಲಿಯ ಹಿಂಬದಿಯಿಂದ ಕ್ಯಾಂಟರ್ ಟ್ರಕ್ ಢಿಕ್ಕಿ ಹೊಡೆಯಿತು. ಇದರಿಂದ ಟ್ರ್ಯಾಕ್ಟರ್-ಟ್ರೋಲಿ ಉರುಳಿ ಬಿತ್ತು ಎಂದು ಪೊಲೀಸ್ ಅಧೀಕ್ಷಕ (ಗ್ರಾಮೀಣ) ದಿನೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
‘‘ಟ್ರ್ಯಾಕ್ಟರ್-ಟ್ರೋಲಿ 61 ಯಾತ್ರಿಗಳನ್ನು ಕರೆದೊಯ್ಯುತ್ತಿತ್ತು. ಅವರು ಕಸ್ಗಂಜ್ ಜಿಲ್ಲೆಯ ರಫತ್ಪುರ ಗ್ರಾಮದಿಂದ ರಾಜಸ್ಥಾನದ ಜಹಾರ್ಪೀರ್ಗೆ ಪ್ರಯಾಣಿಸುತ್ತಿದ್ದರು’’ ಎಂದು ಅವರು ಹೇಳಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ 8 ಮಂದಿ ಕೂಡಲೇ ಸಾವನ್ನಪ್ಪಿದರು. 43 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರವಾಗಿ ಗಾಯಗೊಂಡ ಮೂವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಬಳಿಕ ಇನ್ನೋರ್ವ ಸಾವನ್ನಪ್ಪಿದ ಎಂದು ಸಿಂಗ್ ತಿಳಿಸಿದ್ದಾರೆ.







