ಉತ್ತರ ಪ್ರದೇಶ: ಮದುವೆ ಮನೆಯಲ್ಲಿ ಅತಿಥಿಗಳಿಗೆ ಊಟದ ತಟ್ಟೆ ತಾಗಿತೆಂದು ವೇಟರ್ ನ ಥಳಿಸಿ ಹತ್ಯೆ

Photo: PTI
ಘಾಝಿಯಾಬಾದ್: ಮದುವೆ ಮನೆಯಲ್ಲಿ ತಟ್ಟೆಗಳನ್ನು ಹೊತ್ತೊಯ್ಯುವಾಗ ಅತಿಥಿಗಳಿಗೆ ತಾಗಿತೆಂಬ ಕಾರಣಕ್ಕೆ ವೇಟರ್ ನೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಕಳೆದ ತಿಂಗಳು ಉತ್ತರ ಪ್ರದೇಶದ ಘಾಝಿಯಾಬಾದ್ ನಲ್ಲಿ ನಡೆದಿದೆ ಎಂದು ತಡವಾಗಿ ವರದಿಯಾಗಿದೆ.
ನವೆಂಬರ್ 17ರಂದು ಈ ಘಟನೆ ನಡೆದಾಗ ಅಂಕುರ್ ವಿವಾಹ್ಸ್ ಸಿಜಿಎಸ್ ವಾಟಿಕಾದಲ್ಲಿ ಮೃತ ಪಂಕಜ್ ಎಂಬ ಯುವಕನು ವೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ.
ವಿವಾಹ ಸಮಾರಂಭದಲ್ಲಿ ಪಂಕಜ್ ಹೊತ್ತೊಯ್ಯುತ್ತಿದ್ದ ಬಳಸಿರುವ ತಟ್ಟೆಗಳು ರಿಷಭ್ ಹಾಗೂ ಆತನ ಇಬ್ಬರು ಗೆಳೆಯರಿಗೆ ತಾಗಿದಾಗ ಅವರ ನಡುವೆ ಜಗಳ ಪ್ರಾರಂಭವಾಗಿದೆ.
ರಿಷಭ್ ಹಾಗೂ ಆತನ ಇಬ್ಬರು ಗೆಳೆಯರ ನಡುವಿನ ಜಗಳದ ಸಂದರ್ಭದಲ್ಲಿ ನೆಲಕ್ಕೆ ಬಿದ್ದಿರುವ ಪಂಕಜ್ ತಲೆಗೆ ಮಾರಣಾಂತಿಕ ಪೆಟ್ಟಾಗಿದೆ. ಉಳಿದಿಬ್ಬರು ಆರೋಪಿಗಳನ್ನು ಮನೋಜ್ ಹಾಗೂ ಅಮಿತ್ ಎಂದು ಗುರುತಿಸಲಾಗಿದೆ.
ರಿಷಭ್ ಹಾಗೂ ಆತನ ಗೆಳೆಯರು ಮೃತದೇಹವನ್ನು ಹತ್ತಿರದ ಅರಣ್ಯವೊಂದರಲ್ಲಿ ಅವಿತಿಟ್ಟಿದ್ದರು. ಘಟನೆಯ ನಂತರ ಪೊಲೀಸರು ನವೆಂಬರ್ 18ರಂದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.
ಮೂವರೂ ಆರೋಪಿಗಳನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ.





