ಉತ್ತರ ಪ್ರದೇಶ: ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪ; 42 ಜನರ ವಿರುದ್ಧ ಪ್ರಕರಣ ದಾಖಲು, 9 ಮಂದಿಯ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೋ: ಸೋನಭದ್ರಾ ಜಿಲ್ಲೆಯಲ್ಲಿ ಧಾರ್ಮಿಕ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ 42 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಪೋಲಿಸರು ಈ ಪೈಕಿ ಒಂಭತ್ತು ಜನರನ್ನು ಬಂಧಿಸಿದ್ದಾರೆ.
ವಂಚನೆಯ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಬಡವರು ಮತ್ತು ಬುಡಕಟ್ಟು ಸಮುದಾಯಗಳ ಜನರಿಗೆ ಆಮಿಷಗಳನ್ನು ಒಡ್ಡಲಾಗುತ್ತಿತ್ತು ಎಂದು ಪೋಲಿಸರು ಆರೋಪಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಧಾರ್ಮಿಕ ಪುಸ್ತಕಗಳು, ಪ್ರಚಾರ ಸಾಮಗ್ರಿಗಳು ಮತ್ತು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಇದು ಜನರನ್ನು ವಂಚಿಸಿ ಮತಾಂತರಗೊಳಿಸಲು ಸಂಘಟಿತ ಪ್ರಯತ್ನವನ್ನು ಸೂಚಿಸುತ್ತಿದೆ ಎಂದು ಪೋಲಿಸರು ಹೇಳಿದ್ದಾರೆ.
ಸೋನಭದ್ರಾ ಜಿಲ್ಲೆಯ ಚೋಪನ್ ಪೋಲಿಸ್ ಠಾಣಾ ವ್ಯಾಪ್ತಿಯ ಮಲ್ಹಿಯಾ ತೋಲಾ ನಿವಾಸಿ ನರಸಿಂಗ್ ಎನ್ನುವವರು ಚೋಪನ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದಾಗ ಪ್ರಕರಣವು ಬೆಳಕಿಗೆ ಬಂದಿತ್ತು. ಬುಡಕಟ್ಟು ಮತ್ತು ಬಡಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಬಳಸಲಾಗುತ್ತಿರುವ ವಂಚಕ ತಂತ್ರಗಳ ಬಗ್ಗೆ ಅವರು ತನ್ನ ದೂರಿನಲ್ಲಿ ವಿವರಿಸಿದ್ದರು.
ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ ಗುರುವಾರ ಎಲ್ಲ 42 ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು, ತಮಿಳುನಾಡಿನ ಚೆನ್ನೈನ ಜೈಪ್ರಭು,ಉತ್ತರ ಪ್ರದೇಶದ ರಾಬರ್ಟ್ಸ್ ಗಂಜ್ ನಿವಾಸಿ ಅಜಯ ಕುಮಾರ ಮತ್ತು ಆಂಧ್ರಪ್ರದೇಶದ ವಿಜಯವಾಡಾದ ಚೆಕ್ಕಾ ಇಮ್ಯಾನುವೆಲ್ ಸೇರಿದಂತೆ ಒಂಭತ್ತು ಜನರನ್ನು ಬಂಧಿಸಿದ್ದಾರೆ.







