ಉತ್ತರ ಪ್ರದೇಶ: ಕುಟುಂಬಸ್ಥರಿಂದಲೇ ಯುವತಿಯ ಜೀವಂತ ದಹನಕ್ಕೆ ಯತ್ನ
ಸಾವು ಬದುಕಿನ ಹೋರಾಟದಲ್ಲಿ ಸಂತ್ರಸ್ತೆ

ಸಾಂದರ್ಭಿಕ ಚಿತ್ರ
ಲಕ್ನೋ: ಆಘಾತಕಾರಿ ಘಟನೆಯೊಂದರಲ್ಲಿ ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ನವಡಾ ಖುರ್ಡ್ ಗ್ರಾಮದಲ್ಲಿ ಅವಿವಾಹಿತ ಯುವತಿಯೊಬ್ಬಳನ್ನು ಆಕೆಯ ಕುಟುಂಬಿಕರು ಬೆಂಕಿ ಹಚ್ಚಿ, ಜೀವಂತ ದಹನಕ್ಕೆ ಯತ್ನಿಸಿದ ಘಟನೆ ಶುಕ್ರವಾರ ವರದಿಯಾಗಿದೆ. ಯುವತಿಯ ದೇಹದಲ್ಲಿ ಶೇ.70ರಷ್ಟು ಸುಟ್ಟಗಾಯಗಳಾಗಿದ್ದು, ಆಕೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯ ತಾಯಿ ಹಾಗೂ ಆಕೆಯ ಸಹೋದರ ಈ ಭೀಭತ್ಸ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗಿದೆ. ಸ್ವಗ್ರಾಮದ ಯುವಕನೊಬ್ಬನ ಜೊತೆ ಸಂಬಂಧವಿರಿಸಿಕೊಂಡಿದ್ದ ಯುವತಿಯು ಗರ್ಭಿಣಿಯಾಗಿದ್ದಾಳೆಂದು ತಿಳಿದ ಬಳಿಕ ಅವರು ಆಕೆಯ ಹತ್ಯೆಗೆ ಯತ್ನಿಸಿದ್ದಾರೆ ಎಂದು ‘ಇಂಡಿಯಾ ಟುಡೇ’ ಸುದ್ದಿವಾಹಿನಿ ವರದಿ ಮಾಡಿದೆ.
ಚಿಂತಾಜನಕ ಸ್ಥಿತಿಯಲ್ಲಿರುವ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಆಕೆಯ ತಾಯಿ ಹಾಗೂ ಸೋದರನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 28ರಂದು ಆರೋಪಿಗಳು ಸಂತ್ರಸ್ತೆಯನ್ನು ಕಾಡೊಂದರ ಸಮೀಪ ಕೊಂಡೊಯ್ದು ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರೆಂದು ಹಾಪುರ್ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.





