ಉತ್ತರ ಪ್ರದೇಶ| ಅಪ್ರಾಪ್ತ ಸಹೋದರರನ್ನು ಹತ್ಯೆ ಮಾಡಿದ ಕ್ಷೌರಿಕ; ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ

Photo: TOI
ಬರೇಲಿ: ಕ್ಷೌರದ ಅಂಗಡಿ ಮಾಲಕನೊಬ್ಬ ತನ್ನ ಪಕ್ಕದ ಮನೆಗೆ ನುಗ್ಗಿ 13 ಮತ್ತು 6 ವರ್ಷದ ಇಬ್ಬರು ಸಹೋದರರನ್ನು ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬುಡಾನ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಗುಂಪು ಸೇರಿದ ಸ್ಥಳೀಯರು ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೆಲ ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾರೆ.
ಬುಡಾನ್ ನಗರದ ಬಾಬಾ ಕಾಲೋನಿಯಲ್ಲಿ ಕ್ಷೌರದ ಅಂಗಡಿ ನಡೆಸುತ್ತಿದ್ದ ಸಾಜಿದ್ (22) ಎಂಬಾತ ಪಕ್ಕದ ವಿನೋದ್ ಠಾಕೂರ್ ಎಂಬವರ ಮನೆಗೆ ನುಗ್ಗಿ ಅವರ ಮಕ್ಕಳಾದ ಆಯುಷ್ (13) ಮತ್ತು ಅಹಾನ್ ಅಲಿಯಾಸ್ ಹನಿ (6) ಎಂಬವರನ್ನು ಹರಿತವಾದ ಆಯುಧಗಳಿಂದ ಹೊಡೆದು ಸಾಯಿಸಿದ್ದ. ವಿನೋದ್ ಅವರ ಮತ್ತೊಬ್ಬ ಮಗ ಪಿಯೂಷ್ (8) ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಬೆನ್ನಲ್ಲೇ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ರಿಕ್ತ ಜನ ಪ್ರಾರ್ಥನಾ ಸ್ಥಳದ ಬಳಿ ಗುಂಪು ಸೇರಿದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಈ ಹತ್ಯೆಯ ಕಾರಣ ತಿಳಿದುಬಂದಿಲ್ಲ. ಇದಾದ ಸ್ವಲ್ಪ ಹೊತ್ತಿನಲ್ಲೇ ಎಸ್ಎಸ್ಪಿ ಅಲೋಕ್ ಪ್ರಿಯದರ್ಶಿನಿ ಪ್ರತಿಭಟನಾಕಾರರಿಗೆ ಮಾಹಿತಿ ನೀಡಿ ಸಾಜಿದ್ ಪೊಲೀಸ್ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಹಣದ ವಿಷಯದಲ್ಲಿ ಇದ್ದ ಜಗಳದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಮೂಲಗಳು ಹೇಳಿವೆ. ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಸಾಜಿದ್ ಅರಣ್ಯ ಪ್ರದೇಶದಲ್ಲಿ ಅಡಗಿದ್ದ. ಪೊಲೀಸರು ಆತನ ಬಂಧನಕ್ಕೆ ಪ್ರಯತ್ನ ಮಾಡಿದಾಗ ಪೊಲೀಸರತ್ತ ಗುಂಡು ಹಾರಿಸಿದ. ಪ್ರತಿದಾಳಿಯಲ್ಲಿ ಆರೋಪಿ ತೀವ್ರವಾಗಿ ಗಾಯಗೊಂಡ. ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟ ಎಂದು ಎಸ್ಎಸ್ಪಿ ಹೇಳಿದ್ದಾರೆ.







