ಉತ್ತರ ಪ್ರದೇಶ | ಕಚೇರಿ ಎದುರು ಪೊಲೀಸರೊಂದಿಗೆ ಘರ್ಷಣೆ; ಸಂಭಲ್ ಪಾದಯಾತ್ರೆಯನ್ನು ರದ್ದುಗೊಳಿಸಿದ ಕಾಂಗ್ರೆಸ್
ಡಿಸೆಂಬರ್ 10ರ ನಂತರ ಭೇಟಿ ನೀಡಲಿದ್ದೇವೆ ಎಂದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್

PC : PTI
ಸಂಭಲ್: ಲಕ್ನೊದಲ್ಲಿರುವ ಪಕ್ಷದ ಕಚೇರಿ ಎದುರು ಪೊಲೀಸರೊಂದಿಗೆ ಘರ್ಷಣೆ ನಡೆದ ನಂತರ, ಹಿಂಸಾಚಾರ ಪೀಡಿತ ಸಂಭಲ್ ನಲ್ಲಿ ಸೋಮವಾರ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆ ಯೋಜನೆಯನ್ನು ಉತ್ತರ ಪ್ರದೇಶ ಕಾಂಗ್ರೆಸ್ ಘಟಕ ರದ್ದುಗೊಳಿಸಿದೆ.
ಡಿಸೆಂಬರ್ 10ರವರೆಗೆ ಹೊರಗಿನವರು ಸಂಭಲ್ ಗೆ ಪ್ರವೇಶಿಸುವಂತಿಲ್ಲ ಎಂಬ ನಿರ್ಧಾರವನ್ನು ಉಲ್ಲೇಖಿಸಿ, ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿದ್ದರಿಂದ, ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ಅವರ ಪಾದಯಾತ್ರೆಯನ್ನು ಮುಂದೂಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಜಯ್ ರಾಯ್, “ನಿರ್ಬಂಧಗಳು ತೆರವುಗೊಂಡ ನಂತರ, ಆ ಕುರಿತು ನಿಮಗೆ ಮಾಹಿತಿ ನೀಡಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ನನಗೆ ತಿಳಿಸಿದ್ದಾರೆ. ಈ ಕುರಿತು ಪೊಲೀಸರು ನಮಗೆ ಮಾಹಿತಿ ನೀಡಿದ ದಿನ ಕಾಂಗ್ರೆಸ್ ಪಕ್ಷದ ನಿಯೋಗವೊಂದು ಸಂಭಲ್ ಗೆ ಭೇಟಿ ನೀಡಲಿದೆ” ಎಂದು ತಿಳಿಸಿದರು.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್ ನೇತೃತ್ವದ ನಿಯೋಗವೊಂದು ಸಂಭಲ್ ಗೆ ತೆರಳಲು ಮುಂದಾದಾಗ, ಉತ್ತರ ಪ್ರದೇಶ ಕಾಂಗ್ರೆಸ್ ಕಚೇರಿ ಎದುರು ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಭದ್ರತಾ ಸಿಬ್ಬಂದಿಗಳು ಅಜಯ್ ರಾವ್ ಅವರ ಕಾರನ್ನು ಪಕ್ಷದ ಕಚೇರಿಯ ದ್ವಾರದ ಬಳಿಯೇ ತಡೆದಿದ್ದರಿಂದ, ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳದಲ್ಲಿ ಗದ್ದಲ ಉಂಟಾಯಿತು.
ತಮಗೆ ಕಚೇರಿಯಿಂದ ಹೊರಗೆ ತೆರಳಲು ಅವಕಾಶ ನೀಡದ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಅಜಯ್ ರಾಯ್ ಹಾಗೂ ಇನ್ನಿತರ ನಾಯಕರು ಪಕ್ಷದ ಕಚೇರಿ ಎದುರು ಧರಣಿ ಕುಳಿತರು. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ನಾಯಕರು, ಸಂಭಲ್ ನಲ್ಲಿನ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುವ ನಮ್ಮ ಪ್ರಯತ್ನಕ್ಕೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.







