ಉತ್ತರ ಪ್ರದೇಶ | ಸರ್ಕಾರಿ ಅಧಿಕಾರಿಯಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ

ಲಕ್ನೋ: ಆರು ವರ್ಷ ವಯಸ್ಸಿನ ದಲಿತ ಬಾಲಕಿಯೊಬ್ಬಳ ಮೇಲೆ ಆಕೆಯ ಮನೆಯಲ್ಲೇ ಅತ್ಯಾಚಾರ ಎಸಗಿ, ಮೇಕೆಯ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಆರೋಪದಲ್ಲಿ 57 ವರ್ಷ ವಯಸ್ಸಿನ ಸರ್ಕಾರಿ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಚೇರಿ ಕೆಲಸಗಳಿಗಾಗಿ ಪದೇ ಪದೇ ಗ್ರಾಮಕ್ಕೆ ಬರುತ್ತಿದ್ದ ಅಧಿಕಾರಿ, ಪಕ್ಕದ ಮನೆಯ ಮಗುವಿನ ಜತೆ ಆಟವಾಡುತ್ತಿದ್ದ ಬಾಲಕಿಯನ್ನು ಕಂಡು, ಮನೆಯಲ್ಲಿ ದೊಡ್ಡವರು ಯಾರೂ ಇಲ್ಲ ಎನ್ನುವುದನ್ನು ದೃಢಪಡಿಸಿಕೊಂಡು ಮನೆಗೆ ನುಗ್ಗಿದ ಎಂದು ಸಂತ್ರಸ್ತೆಯ ಕುಟುಂಬದವರು ಹೇಳಿದ್ದಾರೆ.
ಈ ಅತ್ಯಾಚಾರ ಹಾಗೂ ಮೃಗಸಂಭೋಗವನ್ನು ಪಕ್ಕದ ಮನೆಯ ಮಗು ದಾಖಲಿಸಿಕೊಂಡಿದೆ. ಈ ಘೋರ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಕ್ಷಣ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದು, ಬಾಲಕಿಯ ಕುಟುಂಬಕ್ಕೆ 8.25 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.
ಆರೋಪಿ ಅಧಿಕಾರಿ ಗಜೇಂದ್ರ ಸಿಂಗ್ ರಸೂಲ್ ಪುರ ಗ್ರಾಮದವನಾಗಿದ್ದು, ಶಿಖಾರಪುರ ತಾಲೂಕು ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜಿತನಾಗಿದ್ದ. ಅಹ್ಮದ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಕ್ಕೆ ಸೋಮವಾರ ಸಂಜೆ ಈತ ಭೇಟಿ ನೀಡಿದ್ದು, ಮನೆಯ ಅಂಗಳದಲ್ಲಿ ಬಾಲಕ- ಬಾಲಕಿ ಆಟವಾಡುತ್ತಿರುವುದನ್ನು ಕಂಡು ಮನೆಯನ್ನು ಪ್ರವೇಶಿಸಿ ಮಂಚದ ಮೇಲೆ ಕುಳಿತ ಎನ್ನಲಾಗಿದೆ. "ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದ್ದೇ ಅಲ್ಲಿ ಕಟ್ಟಿಹಾಕಿದ್ದ ಮೇಕೆಯ ಮೇಲೆ ಕೂಡಾ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ. ಒಬ್ಬ ಬಾಲಕ ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಸಿಂಗ್ ನನ್ನು ಬಂಧಿಸಲಾಗಿದ್ದು, ಆತನನ್ನು ಅಮಾನತುಗೊಳಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಎಸ್ ಪಿ ಶ್ಲೋಕ್ ಕುಮಾರ್ ವಿವರಿಸಿದ್ದಾರೆ.
ಬಾಲಕಿಯ ತಂದೆ ಹಾಗೂ ತಾಯಿ ಘಟನೆ ನಡೆದ ಸಂದರ್ಭದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ನಡೆದ ಘಟನೆಯನ್ನು ಬಾಲಕ ಹಾಗೂ ಬಾಲಕಿ ಪೋಷಕರಿಗೆ ವಿವರಿಸಿದ್ದು, ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.







