ಬಾಬರ್ ಹೆಸರಿನಲ್ಲಿ ನಿರ್ಮಾಣವಾಗುವ ಯಾವುದೇ ಮಸೀದಿ ನೆಲಸಮವಾಗಲಿದೆ: ಉತ್ತರ ಪ್ರದೇಶ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಬೆದರಿಕೆ

Photo : x/kpmaurya1
ಝಾನ್ಸಿ (ಉತ್ತರ ಪ್ರದೇಶ): ಮುಘಲ್ ಚಕ್ರವರ್ತಿ ಬಾಬರ್ ಹೆಸರಿನಲ್ಲಿ ನಿರ್ಮಾಣವಾಗುವ ಮಸೀದಿಗಳು ತೀವ್ರ ವಿರೋಧ ಎದುರಿಸಲಿವೆ ಎಂದು ರವಿವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ವಿನ್ಯಾಸ ಹೋಲುವ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಿಗೇ ಕೇಶವ್ ಪ್ರಸಾದ್ ಮೌರ್ಯರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಶಂಕುಸ್ಥಾಪನೆಯ ಬೆನ್ನಿಗೇ ಚುನಾವಣಾ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಕಾವೇರಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, "ಮಸೀದಿ ನಿರ್ಮಾಣದ ಬಗ್ಗೆ ನಮಗ್ಯಾವ ತಕರಾರೂ ಇಲ್ಲ. ಆದರೆ, ಬಾಬರ್ ಹೆಸರಲ್ಲಿ ಯಾರಾದರೂ ಮಸೀದಿ ನಿರ್ಮಾಣ ಮಾಡಿದರೆ ನಾವು ಅದನ್ನು ವಿರೋಧ ಮಾತ್ರ ಮಾಡುವುದಿಲ್ಲ, ಬದಲಿಗೆ ಅದು ತಕ್ಷಣವೇ ನೆಲಸಮಗೊಳ್ಳುವುದನ್ನು ಖಾತರಿ ಪಡಿಸಲಿದ್ದೇವೆ" ಎಂದು ಬೆದರಿಕೆ ಒಡ್ಡಿದ್ದಾರೆ.





