ಉತ್ತರ ಪ್ರದೇಶ | ಜಾತಿ ಆಧಾರಿತ ಎನ್ಕೌಂಟರ್ ; ಆರೋಪ ನಿರಾಕರಿಸಿದ ಪೊಲೀಸ್ ಮಹಾನಿರ್ದೇಶಕ

ಉತ್ತರಪ್ರದೇಶ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ಪ್ರಶಾಂತ್ ಕುಮಾರ್ | PC : X/@PrashantK_IPS90
ಲಕ್ನೊ : ಪೊಲೀಸರು ಆರೋಪಿಗಳ ಜಾತಿ ಆಧರಿಸಿ ಎನ್ಕೌಂಟರ್ ನಡೆಸುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಉತ್ತರಪ್ರದೇಶ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ಪ್ರಶಾಂತ್ ಕುಮಾರ್ ಸೋಮವಾರ ನಿರಾಕರಿಸಿದ್ದಾರೆ. ಅಲ್ಲದೆ, ರಾಜ್ಯ ಪೊಲೀಸರು ಯಾವುದೇ ರೀತಿಯ ಪಕ್ಷಪಾತವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ.
ಇಲ್ಲಿ ನಡೆದ ಆಲ್ ಇಂಡಿಯಾ ರೆಸ್ಲಿಂಗ್ ಕ್ಲಸ್ಟರ್ನ ಕಾರ್ಯಕ್ರಮದ ಉದ್ಘಾಟನೆಯ ನೇಪಥ್ಯದಲ್ಲಿ ಡಿಜಿಪಿ ಪ್ರಶಾಂತ್ ಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಆಭರಣದ ಅಂಗಡಿಯಿಂದ 1.5 ಕೋಟಿ ರೂ. ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾದ ಮಂಗೇಶ್ ಯಾದವ್ನನ್ನು ಪೊಲೀಸರು ಸುಲ್ತಾನ್ಪುರ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದರು. ಇದಾದ ಬಳಿಕ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಇತ್ತೀಚೆಗೆ ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದು ನಕಲಿ ಎನ್ಕೌಂಟರ್. ಜಾತಿಯ ಆಧಾರದಲ್ಲಿ ಈ ಎನ್ಕೌಂಟರ್ ನಡೆಸಲಾಗಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು.
ಆದರೆ, ಈ ಆರೋಪವನ್ನು ಡಿಜಿಪಿ ಕುಮಾರ್ ನಿರಾಕರಿಸಿದ್ದಾರೆ. ‘‘ಪೊಲೀಸರು ಅಂತಹ ಕೆಲಸ ಮಾಡುವುದಿಲ್ಲ. ಪೊಲೀಸರ ಮೇಲೆ ಗುಂಡು ಹಾರಿಸಿದಾಗ, ಅಂತಹ ಸನ್ನಿವೇಶವನ್ನು ಎದುರಿಸಿದ ನಮ್ಮ ಮಾಜಿ ಅಧಿಕಾರಿಗಳಿಗೆ ಹಾಗೂ ಎಲ್ಲರಿಗೂ ಗೊತ್ತು’’ ಎಂದು ಅವರು ಹೇಳಿದ್ದಾರೆ.
ಕಾಳಿಂದಿ ಎಕ್ಸ್ಪ್ರೆಸ್ ರೈಲನ್ನು ಕಾನ್ಪುರದಲ್ಲಿ ಹಳಿತಪ್ಪಿಸಲು ಪ್ರಯತ್ನಿಸಿದ ಕುರಿತಂತೆ ಅವರು, ನಮ್ಮ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಾವು ಈ ಘಟನೆಯನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ. ಯಾವುದೇ ಸತ್ಯ ಬೆಳಕಿಗೆ ಬಂದರೂ ಅವುಗಳನ್ನು ಮಾಧ್ಯಮಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.







