ಉತ್ತರ ಪ್ರದೇಶ: ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆಗೈದು ವೈದ್ಯನ ಆತ್ಮಹತ್ಯೆ

ರಾಯ್‌ಬರೇಲಿ: ಇಲ್ಲಿನ ರೈಲ್ವೆ ಆಸ್ಪತ್ರೆಯಲ್ಲಿ ನಿಯೋಜಿತರಾಗಿದ್ದ ವೈದ್ಯರೊಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು, ಆನಂತರ ತಾನೂ ಸಾವಿಗೆ ಶರಣಾದ ಘಟನೆ ಬುಧವಾರ ವರದಿಯಾಗಿದೆ.
ಮಿರ್ಝಾಪುರದವರಾದ ಅರುಣ್ ಸಿಂಗ್(45) ರಾಯ್‌ಬರೇಲಿಯ ಮಾಡರ್ನ್ ರೈಲು ಕೋಚ್ ಫ್ಯಾಕ್ಟರಿ ಆಸ್ಪತ್ರೆಯಲ್ಲಿ 2017ರಿಂದೀಚೆಗೆ ನೇತ್ರ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದರು.ಅವರು ಪತ್ನಿ ಅರ್ಚನಾ (40), ಪುತ್ರ ಆರವ್ (4) ಹಾಗೂ ಪುತ್ರಿ ಅರಿಬಾ (12) ಅವರೊಂದಿಗೆ ಆಸ್ಪತ್ರೆ ಸಂಕೀರ್ಣದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು.
ವೈದ್ಯರ ಸಹದ್ಯೋಗಿಗಳು ಮಂಗಳವಾರ ರಾತ್ರಿ ಕರೆ ಮಾಡಿದಾಗ, ಕುಟುಂಬದ ಯಾರೊಬ್ಬರೂ ಉತ್ತರಿಸಿರಲಿಲ್ಲ. ಇದರಿಂದ ಸಂದೇಹಗೊಂಡ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಆನಂತರ ಪೊಲೀಸರು ಆಗಮಿಸಿ ಮನೆಯ ಎದುರಿನ ಬಾಗಿಲನ್ನು ಒಡೆದು ನೋಡಿದಾಗ ಮೃತದೇಹಗಳು ಕಂಡುಬಂದಿವೆ.
ಸಿಂಗ್ ತನ್ನ ಮಕ್ಕಳನ್ನು ಕೊಲ್ಲುವ ಮುನ್ನ ಅವರಿಗೆ ಮತ್ತು ಬರಿಸುವ ಔಷಧಿ ನೀಡಿದ್ದಾನೆ. ಅಪ್ರಾಪ್ತ ವಯಸ್ಸಿನ ಮಕ್ಕಳ ತಲೆಯಲ್ಲಿ ಗಾಯಗಳು ಕಂಡುಬಂದಿವೆ ಎಂದು ಪೊಲೀಸ್ ಆಧೀಕ್ಷಕ ಅಲೋಕ್ ಪ್ರಿಯನಾಥ್ ತಿಳಿಸಿದ್ದಾರೆ. ವೈದ್ಯ ಸಿಂಗ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಅರುಣ್ ಕುಮಾರ್ ಸಿಂಗ್ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.







