ಉತ್ತರ ಪ್ರದೇಶ| ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ: ಯುಟ್ಯೂಬರ್ ಬಂಧನ, ತಲೆಮರೆಸಿಕೊಂಡ ಎಸ್ಐ

PC: indiatoday
ಕಾನ್ಪುರ, ಜ. 8: ಉತ್ತರಪ್ರದೇಶದ ಕಾನ್ಪುರದಲ್ಲಿ ಈ ವಾರದ ಆರಂಭದಲ್ಲಿ ಸ್ಥಳೀಯ ಯುಟ್ಯೂಬರ್ ಹಾಗೂ ಪೊಲೀಸ್ ಅಧಿಕಾರಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಬಾಲಕಿಯನ್ನು ರಾತ್ರಿ 10 ಗಂಟೆ ಸುಮಾರಿಗೆ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ರೈಲ್ವೇ ಹಳಿಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸುಮಾರು ಎರಡು ಗಂಟೆಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಯಿತು. ಅರೆ ಪ್ರಜ್ಞೆಯ ಅವಸ್ಥೆಯಲ್ಲಿದ್ದ ಆಕೆಯನ್ನು ಆನಂತರ ಮನೆಯ ಹೊರಗೆ ಬಿಡಲಾಯಿತು ಎಂದು ಹೇಳಲಾಗಿದೆ.
ಎಫ್ಐಆರ್ನಲ್ಲಿ ಪೊಲೀಸರು ಸಬ್ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಸ್ಥಳೀಯ ಯುಟ್ಯೂಬರ್ ಶಿವಬರನ್ ಯಾದವ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಯಾದವ್ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಸಬ್ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯನನ್ನು ಬಂಧಿಸಲು ನಾಲ್ಕು ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಬಿಥೂರ್ ಪೊಲೀಸ್ ಠಾಣೆಗೆ ನಿಯೋಜನೆಯಾಗಿದ್ದರೂ ಘಟನೆ ನಡೆದ ಸಂದರ್ಭ ಮೌರ್ಯ ಸಚೆಂಡಿಯಲ್ಲಿದ್ದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಬಾಲಕಿಯ ಕುಟುಂಬ ಆರೋಪಿಸಿದೆ. ಆರಂಭದಲ್ಲಿ ಈ ಪ್ರಕರಣದಲ್ಲಿ ಪೊಲೀಸರೊಬ್ಬರು ಭಾಗಿಯಾಗಿದ್ದಾರೆ ಎಂದು ಹೇಳಿದಾಗ ಅವರು ದೂರನ್ನು ವಜಾಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಬಾಲಕಿಯ ಹೇಳಿಕೆ ಆಧಾರದಲ್ಲಿ ಸಬ್ ಇನ್ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಯುಟ್ಯೂಬರ್ ಶಿವಬರಣ್ ಯಾದವ್ನ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಯಾದವ್ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಸಬ್ ಇನ್ಸ್ಪೆಕ್ಟರ್ನನ್ನು ಬಂಧಿಸಲು 4 ತಂಡಗಳನ್ನು ರೂಪಿಸಲಾಗಿದೆ’’ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಹೇಳಿದ್ದಾರೆ.







