ಭಾರತ-ನೇಪಾಳ ಗಡಿಯಲ್ಲಿರುವ ಅಕ್ರಮ ಮದ್ರಸ, ಮಸೀದಿ ನೆಲಸಮ ಮುಂದುವರಿಸಿದ ಉತ್ತರ ಪ್ರದೇಶ ಸರಕಾರ

ಸಾಂದರ್ಭಿಕ ಚಿತ್ರ
ಲಕ್ನೊ: ಭಾರತ-ನೇಪಾಳ ಗಡಿ ಜಿಲ್ಲೆಗಳಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾದ ಮದ್ರಸ, ಮಸೀದಿ, ಮಝರ್, ಈದ್ಗಾಗಳನ್ನು ನೆಲಸಮಗೊಳಿಸುವುದನ್ನು ಉತ್ತರ ಪ್ರದೇಶ ಸರಕಾರ ಮುಂದುವರಿಸಿದೆ.
ಇದುವರೆಗೆ 225 ಮದ್ರಸ, 30 ಮಸೀದಿ, 25 ಮಝರ್ ಹಾಗೂ 6 ಈದ್ಗಾಗಳನ್ನು ನೆಲಸಮಗೊಳಿಸಲಾಗಿದೆ. ಇದು ಹೆಚ್ಚಿದ ಭದ್ರತಾ ಕ್ರಮಗಳು ಹಾಗೂ ಕಾನೂನು ಬಾಹಿರ ಅತಿಕ್ರಮಣದ ವಿರುದ್ಧ ಮುಖ್ಯಮಂತ್ರಿಯ ಅಭಿಯಾನದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಅತಿಕ್ರಮಿತ ಹಾಗೂ ಅನಧಿಕೃತ ಧಾರ್ಮಿಕ ಸಂಸ್ಥೆಗಳ ನೆಲಸಮ ಕಾರ್ಯಾಚರಣೆ ಗಡಿ ಸಮೀಪದ ಮಹಾರಾಜ್ಗಂಜ್, ಸಿದ್ಧಾರ್ಥನಗರ್, ಬಲರಾಂಪುರ, ಶ್ರಾವಷ್ಠಿ, ಬಹರಾಯಿಚ್, ಲಖಿಂಪುರಖೇರಿ ಹಾಗೂ ಫಿಲಿಬೀತ್ ನಲ್ಲಿ ನಡೆದಿದೆ.
ನೌತನವಾದ ಜುಗೌಲಿ ಗ್ರಾಮ ಹಾಗೂ ಫರೆಂದಾ ತೆಹ್ಸಿಲ್ನ ಸೆಮ್ರಹನಾ ಗ್ರಾಮದಲ್ಲಿ ತಲಾ ಒಂದು ಸೇರಿದಂತೆ ಮಹಾರಾಜ್ಗಂಜ್ನಲ್ಲಿ ಹಲವು ಮದ್ರಸಗಳನ್ನು ಬುಧವಾರ ನೆಲಸಮಗೊಳಿಸಲಾಗಿದೆ. ಶ್ರಾವಷ್ಠಿಯ ಭಿಂಗಾ ತೆಹ್ಸಿಲ್ ನ ಕಲಿಂಪೂರ್ವ ರಾಮ್ಪುರ ಜಬ್ದಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾದ ಇನ್ನೊಂದು ಮದ್ರಸವನ್ನು ನಾಶ ಮಾಡಲಾಗಿದೆ. ಬಹರಾಯಿಚ್ನಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿರುವ ಮಝರ್ ಅನ್ನು ಧ್ವಂಸ ಮಾಡಲಾಗಿದೆ.
ನೇಪಾಳದ ಗಡಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಶ್ರಾವಷ್ಠಿಯಲ್ಲಿರುವ 110 ಅನಧಿಕೃತ ಮದ್ರಸಗಳನ್ನು ನಾಶಗೊಳಿಸಲಾಗಿದೆ. ಸಿದ್ಧಾರ್ಥನಗರದಲ್ಲಿ 35 ಹಾಗೂ ಬಲರಾಮ್ಪುರದಲ್ಲಿ 30 ಮದ್ರಸಗಳನ್ನು ನೆಲಸಮಗೊಳಿಸಲಾಗಿದೆ.
ಮಹಾರಾಜ್ಗಂಜ್ ಹಾಗೂ ಸಿದ್ಧಾರ್ಥ್ನಗರದಲ್ಲಿ ಅತಿಕ್ರಮಣ ಭೂಮಿಯಲ್ಲಿ ನಿರ್ಮಿಸಲಾದ ತಲಾ 9 ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬಹರಾಯಿಚ್ನಲ್ಲಿ 8 ಮಸೀದಿಗಳನ್ನು ನೆಲಸಮಗೊಳಿಸಲಾಗಿದೆ. ಬಲರಾಮ್ ಪುರದಲ್ಲಿ 10, ಮಹಾಹಾಜ್ಗಂಜ್ನಲ್ಲಿ 7 ಮಝರ್ಗಳನ್ನು ನಾಶ ಮಾಡಲಾಗಿದೆ. ಶ್ರಾವಷ್ಠಿಯಲ್ಲಿ 2 ಈದ್ಗಾಗಳನ್ನು ಧ್ವಂಸಗೊಳಿಸಲಾಗಿದೆ. ಮಹಾರಾಜ್ಗಂಜ್, ಬಲರಾಂಪುರ, ಬಹರಾಯಿಚ್ ಹಾಗೂ ಲಖಿಂಪುರಖೇರಿಯಲ್ಲಿ ತಲಾ 1 ಮಝರ್ಗಳನ್ನು ನೆಲಸಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.







