ರೋಮಿಯೊ ನಿಗ್ರಹ ತಂಡಗಳನ್ನು ಮರು ಪರಿಚಯಿಸಲಿರುವ ಉತ್ತರ ಪ್ರದೇಶ ಸರಕಾರ

ಆದಿತ್ಯನಾಥ್ | PTI
ಲಕ್ನೊ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಉದ್ದೇಶದೊಂದಿಗೆ ಪರಿಚಯಿಸಲಾಗಿದ್ದ ರೋಮಿಯೊ ನಿಗ್ರಹ ತಂಡಗಳನ್ನು ಮತ್ತೆ ಕ್ರಿಯಾಶೀಲಗೊಳಿಸಲು ಉತ್ತರ ಪ್ರದೇಶ ಸರಕಾರ ಮುಂದಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬುಧವಾರ ಅಂಬೇಡ್ಕರ್ ನಗರ್ ಜಿಲ್ಲೆಯಲ್ಲಿ ನಡೆದ ಸಭೆಯೊಂದರಲ್ಲಿ ಈ ತಂಡಗಳನ್ನು ಮರು ಕ್ರಿಯಾಶೀಲಗೊಳಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
“ಭಯರಹಿತ ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದ ಆದಿತ್ಯನಾಥ್, ಮಹಿಳೆಯರ ಸುರಕ್ಷತೆ ಪ್ರಥಮ ಆದ್ಯತೆ” ಎಂದು ಅಭಿಪ್ರಾಯ ಪಟ್ಟರು ಎಂದು ರಾಜ್ಯ ಸರಕಾರ ಹೇಳಿದೆ ಎಂದು The Hindu ಸುದ್ದಿ ಸಂಸ್ಥೆ ವರದಿ ಮಾಡಿದೆ.
2017ರಲ್ಲಿ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಚುನಾಯಿತರಾದ ನಂತರ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರವು ರೋಮಿಯೊ ನಿಗ್ರಹ ತಂಡಗಳನ್ನು ಪರಿಚಯಿಸಿತ್ತು.
ಈ ತಂಡಗಳಲ್ಲಿರುವ ಪೊಲೀಸ್ ಸಿಬ್ಬಂದಿಗಳು ಮಹಿಳಾ ಕಾಲೇಜುಗಳ ಬಳಿ ಕಂಡು ಬರುವ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ್ದರೆನ್ನಲಾದ ಯುವಕರನ್ನು ಬಹುತೇಕ ಗುರಿಯಾಗಿಸಿಕೊಂಡಿದ್ದರು.





