ಉತ್ತರ ಪ್ರದೇಶ: ‘ಜೈಲ್ ಭರೋ’ಗೆ ಕರೆ ನೀಡಿದ ಇತ್ತೆಹಾದೆ ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಬಂಧನ

ತೌಖೀರ್ ರಝ ಖಾನ್ | Photo: PTI
ಲಕ್ನೋ : ‘‘ಜೈಲ್ ಭರೋ’’ಗೆ ಕರೆ ನೀಡಿರುವುದಕ್ಕಾಗಿ ಇತ್ತೆಹಾದೆ ಮಿಲ್ಲತ್ ಕೌನ್ಸಿಲ್ ನ ಮುಖ್ಯಸ್ಥ ತೌಖೀರ್ ರಝ ಖಾನ್ ರನ್ನು ಬಂಧಿಸಿರುವುದನ್ನು ಅವರ ಬೆಂಬಲಿಗರು ಶುಕ್ರವಾರ ಉತ್ತರಪ್ರದೇಶದ ಬರೇಲಿಯಲ್ಲಿ ಪ್ರತಿಭಟಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮದ್ರಸ ಮತ್ತು ಮಸೀದಿಗಳ ಧ್ವಂಸ ಮತ್ತು ಜ್ಞಾನವಾಪಿ ಮಸೀದಿ ವಿವಾದದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಖಾನ್ ಅತೃಪ್ತಿ ವ್ಯಕ್ತಪಡಿಸಿದ್ದರು. ದೇಶದ ಮುಸ್ಲಿಮರ ದಮನದ ವಿರುದ್ಧ ‘ಜೈಲ್ ಭರೋ’ ಪ್ರತಿಭಟನೆ ನಡೆಸುವಂತೆ ಅವರು ಗುರುವಾರ ಕರೆ ನೀಡಿದ್ದರು.
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಸ್ಥಳೀಯಾಡಳಿತವು ಬುಧವಾರ ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕಾರಿಯ ಮದ್ರಸವನ್ನು ಧ್ವಂಸಗೊಳಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರದ ವೇಳೆ ಪೊಲೀಸ್ ಗೋಲಿಬಾರಿಗೆ ಕನಿಷ್ಠ ಆರು ಮಂದಿ ಬಲಿಯಾಗಿದ್ದಾರೆ. ಧ್ವಂಸದ ಬಳಿಕ ಸ್ಥಳೀಯರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.
ವಾರಾಣಸಿಯ ಜ್ಞಾನವಾಪಿ ಮಸೀದಿಯ ಒಂದು ಭಾಗದಲ್ಲಿ ಪೂಜೆ ಮಾಡಲು ಹಿಂದೂ ಅರ್ಜಿದಾರರಿಗೆ ಸ್ಥಳೀಯ ನ್ಯಾಯಾಲಯವೊಂದು ಇತ್ತೀಚೆಗೆ ಅನುಮತಿ ನೀಡಿದೆ. ಈ ಘಟನೆಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು ಇಸ್ಲಾಮಿಯಾ ಕಾಲೇಜು ಮೈದಾನದಲ್ಲಿ ತನ್ನೊಂದಿಗೆ ಸೇರುವಂತೆ ಖಾನ್ ಗುರುವಾರ ತನ್ನ ಅನುಯಾಯಿಗಳಿಗೆ ಕರೆ ನೀಡಿದ್ದರು. ಅದೇ ವೇಳೆ, ಪೊಲೀಸರಿಗೆ ಯಾವುದೇ ಕಾನೂನು ಮತ್ತು ವ್ಯವಸ್ಥೆ ಸಮಸ್ಯೆಯನ್ನು ಉಂಟುಮಾಡಬಾರದು ಎಂಬುದಾಗಿಯೂ ಅವರು ಹೇಳಿದ್ದರು.
‘‘ಇನ್ನು ನಾವು ಬುಲ್ಡೋಝರ್ ಕಾರ್ಯಾಚರಣೆಯನ್ನು ಸಹಿಸುವುದಿಲ್ಲ. ಸುಪ್ರೀಂ ಕೋರ್ಟಿಗೆ ನಮ್ಮ ಹಿತವನ್ನು ಕಾಪಾಡಲು ಸಾಧ್ಯವಾಗದಿದ್ದರೆ, ನಾವೇ ನಮ್ಮ ಹಿತ ಕಾಪಾಡಿಕೊಳ್ಳುತ್ತೇವೆ. ನಾನು ಈಗ ನಮಾಝ್ ಮಾಡಲು ಹೋಗುತ್ತೇನೆ. ಬಳಿಕ, ನಾನೇ ಬಂಧನಕ್ಕೆ ಒಳಗಾಗುತ್ತೇನೆ’’ ಎಂದು ಅವರು ಹೇಳಿದರು.
ಶುಕ್ರವಾರ, ಬರೇಲಿಯಲ್ಲಿ ಘರ್ಷಣೆ ಮತ್ತು ಕಲ್ಲೆಸೆತ ಘಟನೆಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.







