ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾದ ಉತ್ತರ ಪ್ರದೇಶ
ಒಂದು ಕೋಟಿ ರೂಪಾಯಿವರೆಗಿನ ದಂಡದೊಂದಿಗೆ ಜೀವಾವಧಿ ಶಿಕ್ಷೆ

PC : file photo
ಲಕ್ನೊ: ಪ್ರಶ್ನೆ ಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿರುವ ಉತ್ತರ ಪ್ರದೇಶ ಸರಕಾರ, ಎರಡು ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ ಒಂದು ಕೋಟಿ ರೂಪಾಯಿವರೆಗೆ ದಂಡ ವಿಧಿಸುವ ಪ್ರಸ್ತಾವನೆ ಹೊಂದಿರುವ ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಂತಹ ಅಪರಾಧಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಪ್ರಸ್ತಾವನೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಉತ್ತರ ಪ್ರದೇಶ ಸಾರ್ವತ್ರಿಕ ಪರೀಕ್ಷೆ (ಅನ್ಯಾಯಯುತ ಮಾರ್ಗಗಳ ತಡೆ) ಸುಗ್ರೀವಾಜ್ಞೆ ಅಡಿಯ ಎಲ್ಲ ಅಪರಾಧ ಕೃತ್ಯಗಳನ್ನು ಗಂಭೀರ ಸ್ವರೂಪ ಹಾಗೂ ಜಾಮೀನು ರಹಿತ ಕೃತ್ಯ ಎಂದು ಪರಿಗಣಿಸಲಾಗಿದೆ. ಈ ಅಪರಾಧ ಕೃತ್ಯಗಳ ವಿಚಾರಣೆಯು ಸೆಷನ್ಸ್ ನ್ಯಾಯಾಲಯಗಳಲ್ಲಿ ನಡೆಯಲಿದೆ ಹಾಗೂ ಸಂಯೋಜಿತವಲ್ಲದ ಅಪರಾಧ ಕೃತ್ಯಗಳಾಗಿವೆ. ಈ ಅಪರಾಧ ಕೃತ್ಯಗಳಲ್ಲಿ ಜಾಮೀನು ಪಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ.
ಜೈಲು ಶಿಕ್ಷೆ ಹಾಗೂ ದಂಡವಲ್ಲದೆ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಸ್ವತ್ತನ್ನು ವಶಪಡಿಸಿಕೊಳ್ಳಲೂ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಉತ್ತರ ಪ್ರದೇಶ ಲೋಕಸೇವಾ ಆಯೋಗ, ಉತ್ತರ ಪ್ರದೇಶ ಅಧೀನ ಸೇವಾ ಆಯ್ಕೆ ಮಂಡಳಿ, ಉತ್ತರ ಪ್ರದೇಶ ಪರೀಕ್ಷಾ ಮಂಡಳಿ, ರಾಜ್ಯ ವಿಶ್ವವಿದ್ಯಾಲಯಗಳು ಹಾಗೂ ಪ್ರಾಧಿಕಾರಗಳು, ಸಂಸ್ಥೆಗಳು ಅಥವಾ ಅವು ನಾಮ ನಿರ್ದೇಶನ ಮಾಡಿರುವ ಏಜೆನ್ಸಿಗಳನ್ನು ಈ ಸುಗ್ರೀವಾಜ್ಞೆ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಸರ್ಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಈ ಸುಗ್ರೀವಾಜ್ಞೆಯ ವ್ಯಾಪ್ತಿಯು ಖಾಯಮಾತಿ ಹಾಗೂ ಬಡ್ತಿ ಪರೀಕ್ಷೆಗಳನ್ನೂ ಒಳಗೊಂಡಿದೆ. ಈ ಸುಗ್ರೀವಾಜ್ಞೆಯ ಪ್ರಕಾರ, ನಕಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚುವುದು ಹಾಗೂ ನಕಲಿ ಉದ್ಯೋಗ ಅಂತರ್ಜಾಲ ತಾಣಗಳನ್ನು ತೆರೆಯುವುದೂ ಕೂಡಾ ಶಿಕ್ಷಾರ್ಹ ಅಪರಾಧವಾಗಿದೆ.







