ಉತ್ತರಪ್ರದೇಶ | ಎನ್ಕೌಂಟರ್ ನಲ್ಲಿ ಮುಖ್ತಾರ್ ಅನ್ಸಾರಿ ನಿಕಟವರ್ತಿ, ಭೂಗತಪಾತಕಿ ಹತ್ಯೆ

ಸಾಂದರ್ಭಿಕ ಚಿತ್ರ | PC : ANI
ಲಕ್ನೋ, ಜು. 14: ಹತ್ಯೆಯಾಗಿರುವ ಭೂಗತ ಪಾತಕಿ ಮುಖ್ತಾರ್ ಅನ್ಸಾರಿ ಹಾಗೂ ಮಾಫಿಯಾ ಡಾನ್ ಸಂಜೀವ್ ಜೀವಾ ಅವರ ನಿಕಟ ಸಹವರ್ತಿ ಶಾರುಕ್ ಪಠಾಣ್ ಪಶ್ಚಿಮ ಉತ್ತರಪ್ರದೇಶದ ಮುಝಪ್ಫರ್ನಗರದಲ್ಲಿ ಸೋಮವಾರ ಮುಂಜಾನೆ ನಡೆದ ಪೊಲೀಸ್ ಎನ್ಕೌಂಟರ್ ನಲ್ಲಿ ಹತನಾಗಿದ್ದಾನೆ.
ಅವನು ಭಾಗಿಯಾಗಿದ್ದ ಪ್ರಕರಣಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿಯ ಕೊಲೆ, ಗುತ್ತಿಗೆ ಕೊಲೆ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಒಡ್ಡಿದ ಪ್ರಕರಣಗಳು ಸೇರಿವೆ.
ಉತ್ತರಪ್ರದೇಶ ಪೊಲೀಸ್ನ ವಿಶೇಷ ಕಾರ್ಯ ಪಡೆ (ಎಸ್ಟಿಎಫ್) ನಡೆಸಿದ ಎನ್ಕೌಂಟರ್ ನಲ್ಲಿ 34 ವರ್ಷದ ಪಠಾನ್ ಹತನಾಗಿದ್ದಾನೆ. ಈತ ಜಾಮೀನಿನಲ್ಲಿದ್ದ. ಅಲ್ಲದೆ, ಸಂಭಾಲ್ ಜಿಲ್ಲೆಯಲ್ಲಿ ಈತನ ವಿರುದ್ಧ ಹೊಸ ಕ್ರಿಮಿನಲ್ ಪ್ರಕರಣದ ದಾಖಲಾಗಿದ್ದ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿದ್ದ.
ಎನ್ ಕೌಂಟರ್ ನಿಂದ ಗಾಯಗೊಂಡ ಸ್ಥಿತಿಯಲ್ಲಿದ್ದ ಪಠಾಣ್ ನನ್ನು ಎಸ್ಟಿಎಫ್ ನ ಮೀರತ್ ಘಟಕ ಸುತ್ತುವರಿದು ಬಂಧಿಸಿತು. ಅನಂತರ ಆತನನ್ನು ಆಸ್ಪತ್ರೆಗೆ ಕೊಂಡೊಯ್ದಿತು. ಆದರೆ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದರು ಎಂದು ಹೆಚ್ಚುವರಿ ಡಿಜಿಪಿ ಅಮಿತಾಬ್ ಯಶ್ ತಿಳಿಸಿದ್ದಾರೆ.





