ಉತ್ತರ ಪ್ರದೇಶ: ದಿನಸಿ ಅಂಗಡಿ ಮಾಲಕನಿಗೆ 141 ಕೋಟಿ ರೂ. ತೆರಿಗೆ ನೋಟಿಸ್!

ಸಾಂದರ್ಭಿಕ ಚಿತ್ರ
ಬುಲಂದ್ ಶಹರ್: ಉತ್ತರ ಪ್ರದೇಶದ ಸಣ್ಣ ದಿನಸಿ ಅಂಗಡಿ ಮಾಲಕರೊಬ್ಬರಿಗೆ ಆದಾಯ ತೆರಿಗೆ ಇಲಾಖೆ 141 ಕೋಟಿ ರೂ. ತೆರಿಗೆ ನೋಟಿಸ್ ನೀಡಿದೆ.
ದಿಲ್ಲಿಯಲ್ಲಿ ಆರು ಸಂಸ್ಥೆಗಳನ್ನು ಸ್ಥಾಪಿಸಲು ನನ್ನ ಪಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಖುರ್ಜಾದ ನಯಾಗಂಜ್ ನಿವಾಸಿಯಾದ ಸುಧೀರ್ ಎಂಬವರು ತಮ್ಮ ನಿವಾಸದಲ್ಲಿ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ 2022ರಲ್ಲೂ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು. ಆದರೆ, ಸದರಿ ಕಂಪನಿಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಸುಧೀರ್ ಅವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ವಿವರಿಸಿದ್ದರು.
ಆದರೆ, ಈ ವರ್ಷದ ಜುಲೈ 10ರಂದೂ ಕೂಡಾ ಸುಧೀರ್ ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಅವರು 1,41,38,47,126 ರೂ. ವ್ಯಾಪಾರ ನಡೆಸಿದ್ದಾರೆ ಎಂದು ಆ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸುಧೀರ್ ಅಕ್ಷರಶಃ ಆಘಾತಕ್ಕೊಳಗಾಗಿದ್ದು, ದಿಲ್ಲಿಯಲ್ಲಿನ ವಿವಿಧ ಕಂಪನಿಗಳಿಗೆ ನನ್ನ ಪಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಖುರ್ಜಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪಂಕಜ್ ರಾಯ್ ತಿಳಿಸಿದ್ದಾರೆ.
ಯಾರಾದರೂ ಬ್ಯಾಂಕ್ ಖಾತೆಗಳನ್ನು ತೆರೆಯಲು, ಶೆಲ್ ಕಂಪನಿಗಳನ್ನು ಸೃಷ್ಟಿಸಲು, ಸಾಲ ಪಡೆಯಲು ಅಥವಾ ತೆರಿಗೆಯನ್ನು ವಂಚಿಸಲು ಬೇರೆಯವರ ಪಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡಾಗ, ಪಾನ್ ಕಾರ್ಡ್ ವಂಚನೆ ನಡೆಯುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಸಂತ್ರಸ್ತರು ತೆರಿಗೆ ನೋಟಿಸ್ ಗಳು ಅಥವಾ ಸಾಲ ವಸೂಲಾತಿ ಕರೆಗಳನ್ನು ಸ್ವೀಕರಿಸಿದಾಗ ಮಾತ್ರ ಈ ವಂಚನೆಗಳು ಬೆಳಕಿಗೆ ಬರುತ್ತವೆ. ಹೀಗಾಗಿ, ಅಪಾಯಗಳನ್ನು ತಗ್ಗಿಸಲು ಕ್ರೆಡಿಟ್ ವರದಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಹಾಗೂ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಜೋಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.







