ಉತ್ತರ ಪ್ರದೇಶ | ಭೂವಿವಾದದಲ್ಲಿ ಜೀವಂತವಾಗಿ ಹೂತು ಹಾಕಿದ್ದ ಯುವಕನನ್ನು ರಕ್ಷಿಸಿದ ಬೀದಿನಾಯಿಗಳು

ಸಾಂದರ್ಭಿಕ ಚಿತ್ರ
ಆಗ್ರಾ : ಭೂ ವಿವಾದಕ್ಕೆ ಸಂಬಂಧಿಸಿದಂತೆ ನಾಲ್ವರು ತನ್ನನ್ನು ಜೀವಂತ ಸಮಾಧಿ ಮಾಡಿದ್ದು,ಬೀದಿ ನಾಯಿಗಳು ತನ್ನನ್ನು ರಕ್ಷಿಸಿರುವುದಾಗಿ ಉತ್ತರ ಪ್ರದೇಶದ ಆಗ್ರಾದ ಯುವಕನೋರ್ವ ಪೋಲಿಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾನೆ.
ಆಗ್ರಾದ ಅರ್ಟೋನಿ ಪ್ರದೇಶದಲ್ಲಿ ಸಂತ್ರಸ್ತ ರೂಪ್ ಕುಮಾರ್ ಅಲಿಯಾಸ್ ಹ್ಯಾಪಿ (24)ಯ ಮೇಲೆ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಎನ್ನುವವರು ಹಲ್ಲೆ ನಡೆಸಿದ್ದರು ಮತ್ತು ಕತ್ತು ಹಿಸುಕಿ ಉಸಿರುಗಟ್ಟಿಸಿದ್ದರು. ಹ್ಯಾಪಿ ಸತ್ತಿದ್ದಾನೆಂದು ಭಾವಿಸಿದ್ದ ಅವರು ಆತನನ್ನು ತಮ್ಮ ಹೊಲದಲ್ಲಿ ಹೂತುಹಾಕಿದ್ದರು. ಆದರೆ ಹೂತು ಹಾಕಿದ್ದರೂ ಆತ ಬದುಕಿದ್ದ ಮತ್ತು ಬೀದಿನಾಯಿಗಳ ಗುಂಪೊಂದು ಸ್ಥಳವನ್ನು ಬಗೆಯಲು ಆರಂಭಿಸಿತ್ತು. ತನಗೆ ನಾಯಿ ಕಚ್ಚಿದ ಅನುಭವವಾದಾಗ ಎಚ್ಚೆತ್ತ ಹ್ಯಾಪಿ ಪ್ರಯತ್ನಪಟ್ಟು ನೆಲದಡಿಯಿಂದ ಹೊರಕ್ಕೆ ಬಂದಿದ್ದ. ಸುಮಾರು ದೂರ ನಡೆದೇ ಸಾಗಿದ್ದ ಆತ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದ್ದರು ಎಂದು ವರದಿಗಳು ತಿಳಿಸಿವೆ.
ನಾಲ್ವರು ವ್ಯಕ್ತಿಗಳು ತನ್ನ ಮಗನನ್ನು ಬಲವಂತದಿಂದ ಮನೆಯಿಂದ ಕರೆದೊಯ್ದಿದ್ದರು ಎಂದು ಹ್ಯಾಪಿಯ ತಾಯಿ ಆರೋಪಿಸಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆ ಪ್ರಗತಿಯಲ್ಲಿದೆ ಮತ್ತು ನಾಲ್ವರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದರು.





