ಉತ್ತರ ಪ್ರದೇಶ | ತಮ್ಮ ಆಯ್ಕೆಯ ವರನೊಂದಿಗೆ ಮದುವೆ ನಿರಾಕರಿಸಿದ ಯುವತಿಯನ್ನು ಹತ್ಯೆ ಮಾಡಿದ ತಂದೆ

ಮುಝಾಫ್ಫರ್ ನಗರ್: ಪೋಷಕರು ಆಯ್ಕೆ ಮಾಡಿದ ಯುವಕನನ್ನು ವರಿಸಲು ನಿರಾಕರಿಸಿದ 20 ವರ್ಷದ ಯುವತಿಯನ್ನು ಆಕೆಯ ತಂದೆಯೇ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಬಳಿಕ, ಶನಿವಾರ ತಾನೇ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿರುವ ಆರೋಪಿ ಗಯ್ಯೂರ್, ತಾನೆಸಗಿದ ಕೃತ್ಯದ ಕುರಿತು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಗಯ್ಯೂರ್ (48) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ರವಿವಾರ ನಗರ ಪೊಲೀಸ್ ವೃತ್ತಾಧಿಕಾರಿ ಸಿದ್ಧಾರ್ಥ್ ಕೆ. ಮಿಶ್ರಾ ತಿಳಿಸಿದ್ದಾರೆ.
ಯುವತಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಯುವತಿಯು ಬೇರೊಬ್ಬ ಯುವಕನನ್ನು ವಿವಾಹವಾಗಲು ಬಯಸಿದ್ದಳು. ಆದರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆಕೆಯ ಪೋಷಕರು, ಬೇರೊಬ್ಬ ಯುವಕನನ್ನು ಆಯ್ಕೆ ಮಾಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
Next Story





