ಉತ್ತರ ಪ್ರದೇಶ | ವೇದಿಕೆಯ ಮರದ ಮೆಟ್ಟಿಲು ಕುಸಿತ; 7 ಮಂದಿ ಮೃತ್ಯು

Photo credit: ANI
ಬಾಗಾಪತ್: ಉತ್ತರಪ್ರದೇಶದ ಬಡೌತ್ನಲ್ಲಿ ಮಂಗಳವಾರ ನಡೆದ ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಾತ್ಕಾಲಿಕ ವೇದಿಕೆಯ ಮೆಟ್ಟಿಲು ಕುಸಿದು ಸಂಭವಿಸಿದ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 60 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಗಾಪತ್ ಜಿಲ್ಲೆಯ ಬಡೌತ್ ನಗರದ ಗಾಂಧಿ ರಸ್ತೆಯಲ್ಲಿರುವ ಶ್ರೀ ದಿಗಂಬರ ಜೈನ ಪದವಿ ಕಾಲೇಜಿನ ಮೈದಾನದಲ್ಲಿ ಭಗವಾನ್ ಆದಿನಾಥನ ‘ಅಭಿಷೇಕ’ಕ್ಕಾಗಿ ಆಯೋಜಿಸಿದ ಕಾರ್ಯಕ್ರಮದ ಸಂದರ್ಭ ಬೆಳಗ್ಗೆ ಸುಮಾರು 8 ಗಂಟೆಗೆ ಈ ದುರ್ಘಟನೆ ಸಂಭವಿಸಿತು.
ಈ ಕಾರ್ಯಕ್ರಮ ಶ್ರೀ 1008 ಆದಿನಾಥ ಭಕ್ತಾಂಬರ ಪ್ರಚಾರದ ಆಶ್ರಯದಲ್ಲಿ ನಡೆದ ಜೈನ ಸಮುದಾಯದ ಮೋಕ್ಷ ಕಲ್ಯಾಣಕ ನಿರ್ವಾಣ ಮಹೋತ್ಸವದ ಭಾಗವಾಗಿತ್ತು.
ಗಾಯಗೊಂಡವರಲ್ಲಿ 20 ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. 39 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾನಸ್ತಂಭದ ಸಂಕೀರ್ಣದಲ್ಲಿರುವ 65 ಅಡಿ ತಾತ್ಕಾಲಿಕ ವೇದಿಕೆಯ ಮರದ ಮೆಟ್ಟಿಲು ಮುರಿದು ಬಿದ್ದಿತು. ಇದರಿಂದ ವೇದಿಕೆಯಲ್ಲಿದ್ದ ಹಾಗೂ ವೇದಿಕೆಯ ಸಮೀಪ ನಿಂತಿದ್ದ ಭಕ್ತರು ಕೆಳಗೆ ಬಿದ್ದರು ಎಂದು ಅವರು ಹೇಳಿದ್ದಾರೆ.
ಗಾಯಾಳುಗಳಿಗೆ ತತ್ಕ್ಷಣ ವೈದ್ಯಕೀಯ ನೆರವು ಸಿಗಲಿಲ್ಲ ಹಾಗೂ ಅವರನ್ನು ಆ್ಯಂಬುಲೆನ್ಸ್ ಲಭ್ಯವಿದ್ದರೂ ಇ-ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ಕೆಲವು ಪತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆಯೋಜಕರು ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಂಡಿದ್ದರು. ನಾವು ಈ ದುರ್ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠ ಅರ್ಪಿತ್ ವಿಜಯ ವರ್ಗೀಯ ತಿಳಿಸಿದ್ದಾರೆ.
ಈ ನಡುವೆ ಘಟನೆಯ ಪ್ರದೇಶದಲ್ಲಿ ಆತಂಕ ಆವರಿಸಿದ ಪರಿಣಾಮ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಯಿತು. ಆದರೆ, ಪೊಲೀಸ್ ಸಿಬ್ಬಂದಿ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.







