ಉತ್ತರ ಪ್ರದೇಶ | ಝೊಮ್ಯಾಟೊ ಡೆಲಿವರಿ ಏಜೆಂಟ್ ಮುಸ್ಲಿಂ ಎಂಬ ಕಾರಣಕ್ಕೆ ಗ್ರಾಹಕರಿಂದ ಹಲ್ಲೆ; ಆರೋಪ

ಸಾಂದರ್ಭಿಕ ಚಿತ್ರ | PTI
ಲಕ್ನೋ: ಉತ್ತರ ಪ್ರದೇಶದ ಲಕ್ನೊದಲ್ಲಿ ಮುಸ್ಲಿಂ ಎನ್ನುವ ಕಾರಣಕ್ಕೆ ಝೊಮ್ಯಾಟೊ ಡೆಲಿವರಿ ಏಜೆಂಟ್ ಮೇಲೆ ಗ್ರಾಹಕರು ಹಲ್ಲೆ ನಡೆಸಿರುವ ಘಟನೆ ಶನಿವಾರ ವರದಿಯಾಗಿದೆ.
ಆರ್ಡರ್ ಡೆಲಿವರಿ ಮಾಡಲು ಹೋದಾಗ, ಗ್ರಾಹಕರು ಡೆಲಿವರಿ ಏಜೆಂಟ್ ಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಡೆಲಿವರಿ ಏಜೆಂಟ್ ಮುಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ.
ನಗರದ ಗೋಮತಿ ನಗರ ಪ್ರದೇಶದಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪಾರ್ಸೆಲ್ ತಲುಪಿಸಿದಾಗ ನಾಲ್ವರು ಗ್ರಾಹಕರ ಸೋಗಿನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಅಸ್ಲಾಂ ಹೇಳಿದ್ದಾರೆ.
"30-36 ವರ್ಷದೊಳಗಿನ ನಾಲ್ವರು ನನ್ನನ್ನು ಹೊಡೆದು, ಒಂದೂವರೆ ಗಂಟೆಗಳ ಕಾಲ ಕೋಣೆಯಲ್ಲಿ ಬಂಧಿಸಿ, ನನ್ನ ಮೊಬೈಲ್ ತೆಗೆದುಕೊಂಡು ನಂತರ ಹಿಂತಿರುಗಿಸಿದರು. ಗುಂಡು ಹೊಡೆದು ಕೊಲ್ಲುವುದಾಗಿ ಬೆದರಿಕೆ ಹಾಕಿದರು" ಎಂದು ಅಸ್ಲಾಂ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಡೆಲಿವರಿ ಏಜೆಂಟ್ ಹೆಸರು ಕೇಳಿದಾಗ, ಆತ ಮುಸ್ಲಿಂ ಎಂದು ತಿಳಿದು ಮತ್ತೆ ಹಲ್ಲೆ ನಡೆಸಿದರು ಎಂದು ಸಂತ್ರಸ್ತ ದೂರಿದ್ದಾರೆ.
ಹಲ್ಲೆ ನಡೆಸಿದವರು ಸಮಯಕ್ಕೆ ಸರಿಯಾಗಿ ಆರ್ಡರ್ ತಲುಪಿಸಲಿಲ್ಲ, ನಿಗದಿತ ಬಿಲ್ಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸಿದ್ದಾರೆ ಎಂದು ಪತ್ರದಲ್ಲಿ ಸುಳ್ಳು ಮಾಹಿತಿ ಬರೆದು ಸಹಿ ಮಾಡುವಂತೆ ಒತ್ತಾಯಿಸಿದರು ಎನ್ನಲಾಗಿದೆ. ಆಕ್ಷೇಪಾರ್ಹ ಪದ ಬಳಸಿ, ನಿಗದಿತ ಬಿಲ್ ಗಿಂತ ಹೆಚ್ಚುವರಿ ಹಣ ಪಾವತಿಸಿದರು ಎಂದು ತಿಳಿದು ಬಂದಿದೆ. ಬಿಲ್ ಮೊತ್ತ 294 ರೂ.ಆಗಿದ್ದರೂ, 330 ರೂ. ಪಾವತಿಸಿದ್ದಾರೆ ಎಂದು ಅಸ್ಲಂ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಶನಿವಾರ ಸಂಜೆಯವರೆಗೆ ಝೊಮಾಟೊ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಸ್ಲಾಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಅಭಿಷೇಕ್ ದುಬೆ ಎಂದು ಗುರುತಿಸಲಾಗಿದೆ.
"ನಾವು ಆರೋಪಿಗಳಲ್ಲಿ ಒಬ್ಬನನ್ನು ಅಭಿಷೇಕ್ ದುಬೆ ಎಂದು ಗುರುತಿಸಿದ್ದೇವೆ ಮತ್ತು ಇತರ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚುತ್ತೇವೆ" ಎಂದು ಗೋಮತಿ ನಗರ ಸ್ಟೇಷನ್ ಹೌಸ್ ಆಫೀಸರ್ ರಾಜೇಶ್ ಕುಮಾರ್ ತ್ರಿಪಾಠಿ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.







