ಉತ್ತರಾಖಂಡ: ಕೇಸರಿ ಸಂಘಟನೆ ಬೆಂಬಲಿಗರಿಂದ 2 ಮಝರ್ ಗಳ ಧ್ವಂಸ

ಸಾಂದರ್ಭಿಕ ಚಿತ್ರ.| Photo: PTI
ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶದ ಅಮಿತ ಗ್ರಾಮ ಪ್ರದೇಶದಲ್ಲಿ ಕೇಸರಿ ಸಂಘಟನೆಯೊಂದರ ಕಾರ್ಯಕರ್ತರು ಸುತ್ತಿಗೆಗಳು ಹಾಗೂ ಜೆಸಿಬಿಯನ್ನು ಬಳಸಿಕೊಂಡು ಎರಡು ಮಝರ್ಗಳನ್ನು ನಾಶಪಡಿಸುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಜೈಶ್ರೀರಾಮ್’ ಘೋಷಣೆಗಳ ನಡುವೆ ಇಬ್ಬರು ಯುವಕರು ಸುತ್ತಿಗೆಗಳಿಂದ ಮಝರ್ಗಳನ್ನು ಒಡೆದುಹಾಕುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ರಾಜ್ಯದ ಎಲ್ಲೆಡೆ ತಲೆಯೆತ್ತಿರುವ ಇಂತಹ ಅಕ್ರಮ ಮಝರ್ಗಳನ್ನು ನಾಶಪಡಿಸಲಾಗುವುದೆಂದು ಒಬ್ಬ ವ್ಯಕ್ತಿಯು ಹೇಳುತ್ತಿರುವುದು ಕೂಡಾ ವೀಡಿಯೊದಲ್ಲಿ ಕೇಳಿಸಿದೆ. ಇದು ದೇವಭೂಮಿಯೇ ಹೊರತು ಮಝರ್ ಭೂಮಿಯಲ್ಲ ಎಂದು ಆತ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಪ್ರಸಕ್ತ ಉತ್ತರಾಖಂಡದ ವಿವಿಧೆಡೆ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು. ಈ ಅಭಿಯಾನದ ಭಾಗವಾಗಿ ಹಲವಾರು ಮಝರ್ಗಳನ್ನು ನಾಶಪಡಿಸಲಾಗಿದೆ.
ಆದರೆ ಈ ವೀಡಿಯೊದಲ್ಲಿ ದಾಖಲಾಗಿರುವ ಮಝರ್ಗಳ ನೆಲಸಮ ಕಾರ್ಯಾಚರಣೆಯನ್ನು ದೇವಭೂಮಿ ರಕ್ಷಾ ಅಭಿಯಾನ ಎಂಬ ತೀವ್ರವಾದಿ ಕೇಸರಿ ಸಂಘಟನೆ ನಡೆಸಿದೆಯೆಂದು ತಿಳಿದುಬಂದಿದೆ. ಮಝರ್ಗಳು ನಿರ್ಮಾಣವಾಗಿರುವ ಸ್ಥಳದ ಮಾಲಕರ ಅನುಮತಿ ಪಡೆದುಕೊಂಡೇ ತಾವು ಈ ಕಾರ್ಯಾಚರಣೆ ನಡೆಸಿರುವುದಾಗಿ ದೇವಭೂಮಿ ರಕ್ಷಾ ಅಭಿಯಾನದ ಅಧ್ಯಕ್ಷ ಸ್ವಾಮಿ ದರ್ಶನ ಭಾರತಿ ತಿಳಿಸಿದ್ದಾರೆ.
ಮಝರ್ಗಳು ನಿರ್ಮಾಣವಾದ ನಿವೇಶನವು ಇಬ್ಬರು ಹಿಂದೂಗಳಿಗೆ ಸೇರಿದ್ದಾಗಿದೆ. ಅವುಗಳನ್ನು ನೆಲಸಮಗೊಳಿಸಲು ಅವರು ನಮಗೆ ಅನುಮತಿ ನೀಡಿದ್ದರು. ಪೊಲೀಸರ ಉಪಸ್ಥಿತಿಯಲ್ಲಿಯೇ ನಾವು ಅದನ್ನು ಮಾಡಿದ್ದೇವೆ’’ ಎಂದವರು ಹೇಳಿದರು.
ರಿಶಿಕೇಶ್ನ ಗುಮಾನಿವಾಲಾ ಹಾಗೂ ಶ್ಯಾಮಪುರ ಪ್ರದೇಶಗಳಲ್ಲಿ ಇಂತಹ 25-30 ಮಝರ್ಗಳಿವೆ. ದೇವಭೂಮಿಯ ಮೇಲೆ ಮಝರ್ಗಳ ನಿರ್ಮಾಣವು ನಮ್ಮ ಧರ್ಮದ ಮೇಲೆ ನಡೆದ ದಾಳಿಯಾಗಿದೆ’’ಎಂವರು ಹೇಳಿದರು.
ಈ ಘಟನೆಗೆ ಸಂಬಂಧಿಸಿ ಭಾರತೀಯ ದಂಡಸಂಹಿತೆಯ 505 ಸೆಕ್ಷನ್ನಡಿ ಅಜ್ಞಾತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಋಷಿಕೇಶ ಕೋಟ್ವಾಲಿಯ ಠಾಣಾಧಿಕಾರಿ ಕುಶಿ ರಾಮ್ ಪಾಂಡೆ ತಿಳಿಸಿದ್ದಾರೆ.







